

ಉಡುಪಿ: ಶ್ರೀ ಮಧ್ವಾಚಾರ್ಯರ ಜನ್ಮಸ್ಥಳ ಪಾಜಕ ಕ್ಷೇತ್ರ ಮಠದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸತ ಚಿತ್ರಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆ ರಚಿಸಿದ ಮಧ್ವಾಚಾರ್ಯರ ಜೀವನ ಚರಿತ್ರೆಗೆ ಸಂಬಂಧಪಟ್ಟ ಪ್ರಮುಖ ಎಂಟು ಕಾವಿ ಚಿತ್ರಕಲೆಗಳನ್ನು ಕಾಣೆಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಧ್ವನವಮಿಯ ಪ್ರಥಮ ದಿನ ಶುಕ್ರವಾರ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಅರ್ಚಕರಾದ ವೇದಮೂರ್ತಿ ಮಾಧವ ಉಪಾಧ್ಯಾಯ, ವಾದಿರಾಜ ಉಪಾಧ್ಯಾಯ, ವೇದಮೂರ್ತಿ ನಂದಳಿಕೆ ವಿಠ್ಠಲ ಭಟ್, ಡಾ. ಪ್ರಮೋದನ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.
ಪಾಜಕ ಮಠವನ್ನು ಸಾಂಪ್ರದಾಯಿಕ ವಿನ್ಯಾಸಗಳಿಂದ ಅಂದಗೊಳಿಸಲಾಗಿದ್ದು, ಚಿತ್ರಗಳಲ್ಲಿ ಶ್ರೀ ಮಧ್ವಾಚಾರ್ಯರ ಹುಟ್ಟು, ತಂದೆಯಿಂದ ಅಕ್ಷರಾಭ್ಯಾಸ, ತಾಯಿಯ ಕರೆಗೆ ಓಗೊಟ್ಟು ಕುಂಜಾರುಗಿರಿ ದುರ್ಗಾ ಬೆಟ್ಟದಿಂದ ಪಾಜಕಕ್ಕೆ ನೆಗೆಯುತ್ತಿರುವ ಬಾಲಕ ವಾಸುದೇವ, ಮಧ್ವಾಚಾರ್ಯರ ಸನ್ಯಾಸ್ಯಾಶ್ರಮ ಸ್ವೀಕಾರ, ಶ್ರೀ ಕ್ಷೇತ್ರ ಬದರಿಯಲ್ಲಿ ಭಗವಾನ್ ವೇದವ್ಯಾಸರಿಂದ ವೇದ ವಿಚಾರಗಳ ವಿಮರ್ಶೆ, ಕಡಲತೀರದಿಂದ ಕೃಷ್ಣನ ಪ್ರತಿಮೆಯನ್ನು ಹೊತ್ತು ತರುತ್ತಿರುವ ಚಿತ್ರ, ವಾಯುದೇವರು, ಮಧ್ವಾಚಾರ್ಯರು ಪೂಜಿಸುತ್ತಿದ್ದ ಅನಂತಾಸನ ದೇವರು, ಮಠದ ಹೊರಬದಿ ಗೋಡೆಯಲ್ಲಿ ಶೇಷಶಯನ ಶ್ರೀಮನ್ನಾರಾಯಣ, ಗರುಡವಾಹನ ವಿಷ್ಣು ಇತ್ಯಾದಿ ಚಿತ್ರಗಳು ಭಕ್ತರನ್ನು ಆಕರ್ಷಿಸುತ್ತಿವೆ.