

ಮಂಡ್ಯ: ಮಾನವ ಮತ್ತು ಪ್ರಾಣಿಗಳ ಸಂಘರ್ಷ ಹಿಂದಿನಿಂದಲೂ ಇದೆ. ಅವುಗಳ ಒಡನಾಟ ಸಾಮರಸ್ಯದಿಂದ ಇದ್ದರೆ ಮನುಷ್ಯ ಮತ್ತು ಪ್ರಾಣಿ ಸಂಕುಲಕ್ಕೆ ಒಳಿತಾಗುತ್ತದೆ ಎಂದು ಬೆಂಗಳೂರಿನ ಅಡವಿ ಅಲರ್ಟ್ ಫೌಂಡೇಷನ್ ಸಂಸ್ಥಾಪಕ ಪವನ್ ಜೋಶಿ ಹೇಳಿದರು.
ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಕುವೆಂಪು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ವಸಂತೋತ್ಸವ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ಮನುಷ್ಯ ಒಬ್ಬನೇ ಹೊರತು ಮನುಷ್ಯನೇ ಎಲ್ಲವೂ ಅಲ್ಲ. ಆದ್ದರಿಂದ ಸಕಲ ಜೀವಿಗಳನ್ನು ಸಂರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಹೊಣೆಯಾಗಲಿ ಎಂದು ಸಲಹೆ ನೀಡಿದರು.
ವಲಯ ಅರಣ್ಯಾಧಿಕಾರಿ ಶೈಲಜಾ ಮಾತನಾಡಿ, ಇಲಾಖೆಯಷ್ಟೇ ಪ್ರಕೃತಿಯ ಉಳಿಸಲು ಸಾಧ್ಯವಿಲ್ಲ. ಬದಲಿಗೆ ಸಾರ್ವಜನಿಕರು ಜತೆಗೂಡಿ ಜವಾಬ್ದಾರಿಯಿಂದ ರಕ್ಷಣೆ ಮಾಡಿದರೆ ನಾವು ನೀವೆಲ್ಲ ಮುಂದಿನ ತಲೆಮಾರಿಗೆ ಈ ಪ್ರಕೃತಿಯನ್ನು ಉಳಿಸಲು ಸಾಧ್ಯ. ಪ್ರಕೃತಿ ಮನುಷ್ಯನ ಎಲ್ಲ ಆಸೆಗಳನ್ನು ಪೂರೈಸುತ್ತದೆ. ಆದರೆ ದುರಾಸೆಗಳನ್ನಲ್ಲ ಎಂದು ತಿಳಿಸಿದರು.
ಯುವ ಕವಿ ಸಬ್ಬನಹಳ್ಳಿ ಶಶಿಧರ ಮಾತನಾಡಿ, ಪ್ರಕೃತಿ ಯಾರೊಬ್ಬರ ಸ್ವತ್ತಲ್ಲ. ಪ್ರಕೃತಿಗೆ ಮನುಷ್ಯರ ಅವಶ್ಯಕತೆ ಇಲ್ಲ. ಆದರೆ ಮನುಷ್ಯನಿಗೆ ಪ್ರಕೃತಿ ಅನಿವಾರ್ಯ. ಹಾಗಾಗಿ ಪ್ರತಿಯೊಬ್ಬರು ತಮ್ಮ ಜಮೀನಿನಲ್ಲಿ ಹಾಗೂ ಮನೆಯ ಮುಂದೆ ಕನಿಷ್ಟ ಎರಡು ಸಸಿ ಬೆಳೆಸಿದರೆ ಈ ಪ್ರಕೃತಿಗೆ ಸಣ್ಣ ಕೊಡುಗೆ ಕೊಟ್ಟಂತೆ ಅಗುತ್ತದೆ ಎಂದರು.
ಅಧ್ಯಾಪಕ ನಾಗರಾಜು ಸಬ್ಬನಹಳ್ಳಿ ಮಾತನಾಡಿದರು. ಹೇಮಂತ್ ತಗ್ಗಹಳ್ಳಿ, ನೇತ್ರಾವತಿ, ಸಿದ್ದೇಗೌಡ, ಲೋಕೇಶ್ ಕಲ್ಕುಣಿ, ಅರಣ್ಯ ಗಸ್ತು ಪಾಲಕರಾದ ರಾಜೇಶ್, ಲಿಂಗರಾಜು, ಸಬ್ಬನಹಳ್ಳಿ ಕುಮಾರ್ ಇತರರಿದ್ದರು. ಮಂಚಶೆಟ್ಟಿ ಕಡಿಲುವಾಗಿಲು ಅಧ್ಯಕ್ಷತೆಯಲ್ಲಿ ನಡೆದ ವಸಂತೋತ್ಸವ ಕವಿಗೋಷ್ಠಿ ಸಂಭ್ರಮದಲ್ಲಿ ಕವಿಗಳಾದ ಅಪ್ಪಾಜಿ ಶ್ರೀರಂಗಪಟ್ಟಣ, ಸದ್ದಾಂ ತಗ್ಗಹಳ್ಳಿ, ಶ್ರೀಧರ ಹಳುವಾಡಿ, ಸತ್ಯವತಿ ಮದ್ದೂರು, ಗಾನಸುಮಾ ಪಟ್ಟಸೋಮನಹಳ್ಳಿ, ಲೋಕೇಶ್ ಕಲ್ಕುಣಿ, ನಗು ಆರ್.ಗೌಡ, ಜಯರಾಮ ಪ್ರಕೃತಿಗೆ ಸಂಬಂಧಪಟ್ಟಂತಹ ಕವನ ಹಾಗೂ ವಾಸ್ತವ ತಲ್ಲಣಗಳ ಬಗ್ಗೆ ಕುರಿತು ಕವನವಾಚನ ಮಾಡಿದರು.