

ಬಾಳೆಹೊನ್ನೂರು: ಕಸಾಪದಿಂದ ಹೋಬಳಿ ಮಟ್ಟದಲ್ಲಿ ವಿದ್ಯಾರ್ಥಿಗಳು, ಯುವಜನರಿಗಾಗಿ ಕಾವ್ಯ ಕಮ್ಮಟ, ಕಥಾ ಕಮ್ಮಟಗಳನ್ನು ಆಯೋಜನೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೋಬಳಿ ಕಸಾಪ ನೂತನ ಅಧ್ಯಕ್ಷ ರತ್ನಾಕರ್ ಗಡಿಗೇಶ್ವರ ಹೇಳಿದರು.
ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಹೋಬಳಿ ಕಸಾಪ ಶುಕ್ರವಾರ ಆಯೋಜಿಸಿದ್ದ ಪದಾಧಿಕಾರಿಗಳ ಸೇವಾದೀಕ್ಷೆ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಾಹಿತ್ಯ ರಚನೆ ತಿಳಿಸಿಕೊಡಲು ಕಮ್ಮಟಗಳನ್ನು ಆಯೋಜನೆ ಮಾಡಲಾಗುವುದು. ಜಾನಪದ ಕಲಾವಿದರಿಗೆ ಒಂದೆಡೆ ಸೇರಿಸಿ ವೇದಿಕೆ ಕಲ್ಪಿಸಿ ಯುವಜನರಿಗೆ ಕಲೆ, ಸಂಸ್ಕೃತಿ ಪರಿಚಯಿಸುವ ಚಿಂತನೆಯಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ತಾಲೂಕು ಕಸಾಪ ವಿದ್ಯಾರ್ಥಿಗಳಿಗೆ ಸೇವಾದೀಕ್ಷೆ ಸಮಾರಂಭದಲ್ಲಿ ತರಬೇತುದಾರರಿಂದ ಪರೀಕ್ಷೆ ಎದುರಿಸುವ ತರಬೇತಿ ನೀಡಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ ಶ್ರದ್ಧೆಯಿಂದ ಅಧ್ಯಯನ ನಡೆಸಿದರೆ ಮಾತ್ರ ಪರೀಕ್ಷೆ ಸುಲಭವಾಗಲಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125 ಅಂಕ ಪಡೆಯುವ ವಿದ್ಯಾರ್ಥಿಗಳನ್ನು ಕಸಾಪದಿಂದ ಸನ್ಮಾನಿಸಲಾಗುವುದು. ಪೂರ್ಣ ಲಿತಾಂಶ ಪಡೆಯುವ ಶಾಲೆಗಳನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಟಿ.ವೆಂಕಟೇಶ ಮಾತನಾಡಿ, ಕಸಾಪ ನಾಡು, ನುಡಿ, ಸಂಸ್ಕೃತಿ ಎತ್ತಿಹಿಡಿಯುವುದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಟ್ಯೂಷನ್ ತರಗತಿಗೆ ನೀಡಿದ 10 ಸಾವಿರ ರೂ. ಸಹಾಯಧನವನ್ನು ಮೇಲ್ವಿಚಾರಕ ಮೋಹನ್ ಶಾಲೆಗೆ ನೀಡಿದರು. ಶಾಲೆಯಿಂದ ಬಡ್ತಿ ಹೊಂದಿ ಮುಖ್ಯಶಿಕ್ಷಕರಾಗಿ ವರ್ಗಾವಣೆಯಾದ ಎಚ್.ಎನ್.ಛಲವಾದಿ, ಹೊಲಿಗೆ ತರಬೇತುದಾರರಾದ ರೇಣುಕಾ ಅವರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಡಿ.ಎನ್.ಮಂಜುನಾಥ್, ಆಡುವಳ್ಳಿ ಗ್ರಾಪಂ ಅಧ್ಯಕ್ಷ ಯು.ಸಿ.ಪ್ರದೀಪ್, ತಾಲೂಕು ಕಸಾಪ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಹೋಬಳಿ ಕಸಾಪ ಕಾರ್ಯದರ್ಶಿ ಕೆ.ಎಂ.ರಾಘವೇಂದ್ರ, ಬಿ.ಎಂ.ಶ್ರೀಚೇತನಾ, ರೋಟರಿ ಮಾಜಿ ಅಧ್ಯಕ್ಷ ಕೆ.ಎ.ವಿವೇಕ್, ಎಸ್‌ಡಿಎಂಸಿ ಅಧ್ಯಕ್ಷ ಶಿವೇಂದ್ರ, ಕಸಾಪ ಪದಾಕಾರಿಗಳಾದ ಶೇಖರ್ ಇಟ್ಟಿಗೆ, ಎ.ಆರ್.ಲತಾ, ಹೇಮಾ, ನವೀದಾಜಾನ್, ಗೀತಾ ಇತರರಿದ್ದರು.