

ಮಂಡ್ಯ: ಯಾವುದೇ ಭಾಷೆಯಲ್ಲಿ ಹಿಡಿತ ಸಾಧಿಸಿ ನೈಪುಣ್ಯತೆ ಪಡೆಯಬೇಕಾದರೆ ಬರವಣಿಗೆಯಲ್ಲಿ ತೊಡಗಬೇಕು. ಬರವಣಿಗೆಯಿಂದ ಭಾಷೆಯ ಕೌಶಲ ವೃದ್ಧಿಸುತ್ತದೆ ಎಂದು ತಗ್ಗಹಳ್ಳಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಎಂ.ಪಿ.ಸವಿತಾ ಅಭಿಪ್ರಾಯಪಟ್ಟರು.
ನಗರದ ಗ್ಲೋಬಲ್ ಮಹೇಶ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಕೆ.ಎಚ್ ಬಾಪೂಜಿ ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ ಹಾಗೂ ಕನ್ನಿಕಾಶಿಲ್ಪ ನವೋದಯ ತರಬೇತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಯುವ ಕವಿ ಸದ್ದಾಂ ತಗ್ಗಹಳ್ಳಿ ಅವರ ಚೊಚ್ಚಲ ಕೃತಿ ‘ಸಂಪಿಗೆ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಶಿಷ್ಯ ಸದ್ದಾಂ ಕವನ ರಚಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಿಕಾಶಿಲ್ಪ ನವೋದಯ ತರಬೇತಿ ಕೇಂದ್ರದ ಸಂಸ್ಥಾಪಕಿ ಡಾ.ಎಚ್.ಆರ್.ಕನ್ನಿಕಾ ಮಾತನಾಡಿ, ನಮ್ಮ ಕನ್ನಡ ಸಾಹಿತ್ಯ ಪರಂಪರೆ ಮಹೋನ್ನತವಾಗಿದೆ. ಕನ್ನಡಿಗರಲ್ಲಿ ಸ್ವಾಭಿಮಾನ, ಹೋರಾಟದ ಕಿಚ್ಚನ್ನು ಹಚ್ಚಿದ್ದು ಕನ್ನಡ ಸಾಹಿತ್ಯ. ಅಂತಹ ಸಾಹಿತ್ಯ ಉಳಿದು ಬೆಳೆಯಬೇಕಾದರೆ, ಪ್ರತಿಯೊಬ್ಬರ ಬದುಕು ಹಸನಾಗಬೇಕಾದರೆ ಎಲ್ಲರೂ ಪುಸ್ತಕಗಳನ್ನು ಹೆಚು ಓದಬೇಕು. ಓದುವ ಸಂಸ್ಕೃತಿ ಹರಡಬೇಕು ಎಂದು ಸಲಹೆ ನೀಡಿದರು.
ಗ್ಲೋಬಲ್ ಮಹೇಶ್ ಪಿಯು ಕಾಲೇಜಿನ ಮುಖ್ಯಸ್ಥ ಯೋಗಾನಂದ ಅಧ್ಯಕ್ಷತೆ ವಹಿಸಿದ್ದರು. ಕವನ ಸಂಕಲನ ಕುರಿತು ಉಪನ್ಯಾಸಕ ಮಂಚಶೆಟ್ಟಿ ಮಾತನಾಡಿದರು. ಪತ್ರಕರ್ತ ಚಂದ್ರಶೇಖರ ದ.ಕೋ.ಹಳ್ಳಿ ಇತರರಿದ್ದರು. ಲೇಖಕ ಸಬ್ಬನಹಳ್ಳಿ ಶಶಿಧರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.