ಕನ್ನಡಕ್ಕಾಗಿ ತಮ್ಮ ಜೀವನ ಮುಡಿಪಿಟ್ಟ ಕವಿಗಳು: ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿಕೆ

Poet Kavyavalokana mandya
Published on

ಮಂಡ್ಯ: ಉತ್ಕೃಷ್ಟ ಕವಿಗಳು ತಮ್ಮ ಜೀವನವನ್ನು ಮುಡಿಪಿಟ್ಟು ಕನ್ನಡವನ್ನು ಕಟ್ಟಿದ್ದಾರೆ. ಅದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯ ಎಂದು ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.

ಇಲ್ಲಿನ ನೆಹರುನಗರದ ಮಾಂಡವ್ಯ ಪಿಯು ಕಾಲೇಜು ಆವರಣದಲ್ಲಿ ಲೇಖಕಿಯರ ಸಂಘ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕವಿ-ಕಾವ್ಯಾವಲೋಕನ ಉಪನ್ಯಾಸ ಮಾಲೆ-5 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಹಿತ್ಯ ಪರಂಪರೆಯ ಬಗ್ಗೆ ತಿಳಿದುಕೊಳ್ಳಬೇಕು. ತಮ್ಮೆಲ್ಲರಿಗೂ ಕನ್ನಡ ಸಾಹಿತ್ಯದ ಪರಿಚಯವಿದೆ. ಕವನ, ಕಥೆ ಬರೆಯುವ ಶಕ್ತಿ ತಮ್ಮಲ್ಲಿ ಇರುತ್ತದೆ. ಆದ್ದರಿಂದ ಇಂತಹ ಕವಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ದ.ರಾ.ಬೇಂದ್ರೆ ಅವರು ಕನ್ನಡದ ಶ್ರೇಷ್ಟ ಕವಿಗಳಲ್ಲಿ ಒಬ್ಬರು. ಭಾರತದಲ್ಲಿ ಶ್ರೇಷ್ಟ ಗುರುಪರಂಪರೆ ಇದೆ ಅಂತಹ ಕೆಲಸವನ್ನು ಕವಿಗಳು ಗುರು ಪರಂಪರೆಯಲ್ಲಿ ಬೆಳೆಸಿದ್ದಾರೆ. ಜಿ.ಎಸ್.ಶಿವರುದ್ರಪ್ಪ ಅವರ ಎದೆ ತುಂಬಿ ಹಾಡುವೆನು ಕವಿತೆ ಜನಜನಿತವಾಗಿ ಮನಸ್ಸಿಗೆ ಆಹ್ಲಾದ ಕೊಡುವ ಗೀತೆ ಎಂದು ಹೇಳಿದರು.

ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಸ್.ಕೆ.ಮಹೇಶ್ ಮಾತನಾಡಿ, ದ.ರಾ.ಬೇಂದ್ರೆ ಅವರು ಜೀವನಕ್ಕೆ ಬಹಳ ಹತ್ತಿರವಾದ ಕವನ ಬರೆದಿದ್ದಾರೆ. ಕವಿಗೆ ಕಾವ್ಯವನ್ನು ಬರೆಯಲು ಕವಿ ಮನಸ್ಸಿರಬೇಕು. ಬೇಂದ್ರೆ ಅವರು ಸಮಾಜವನ್ನು ಅವಲೋಕನ ಮಾಡಿದ ಕವಿ. ಜಗತ್ತಿನ ಎಲ್ಲ ಸಾಧಕರು ಕೂಡ ಬೆಳಗಿನ ಜಾವ ಎಚ್ಚರಗೊಂಡು ಅಧ್ಯಯನ ಮಾಡಿದವರು ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಮಾಂಡವ್ಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಕೆ.ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೇಖಕಿಯರ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಎಂ.ಕೆಂಪಮ್ಮ, ಸಹ ಕಾರ್ಯದರ್ಶಿ ಡಾ.ಆರ್.ಪಿ.ಛಾಯಾ, ಕೋಶಾಧ್ಯಕ್ಷೆ ಡಾ.ಪಿ.ಸುಮಾರಾಣಿ ಶಂಭು, ನಿರ್ದೇಶಕಿಯರಾದ ಶಿಲ್ಪಾ, ಆಶಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net