

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯದ ಕೆಲ ವಿದ್ಯಾರ್ಥಿಗಳು ಹಾಗೂ ಕೆಲ ಸಂಘಟನೆಗಳ ಒಣ ಪ್ರತಿಷ್ಠೆಯಿಂದ ನಾಡಿನ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರಿಗೆ ಅಗೌರವ ತೋರಿದ ಘಟನೆ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬುಧವಾರ ನಡೆದಿದೆ.
ಕರ್ನಾಟಕ ವಿಶ್ವ ವಿದ್ಯಾಲಯವು ನೀಡುವ ಅರಿವೇ ಗುರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸುವರ್ಣ ಮಹೋತ್ಸವ ಭವನದಲ್ಲಿ ಬುಧವಾರ ಏರ್ಪಡಿಸಲಾಗಿತ್ತು. 2024ನೇ ಸಾಲಿನ ಪ್ರಶಸ್ತಿಯನ್ನು ಕಲಾ ಕ್ಷೇತ್ರದಿಂದ ಡಾ. ಚಂದ್ರಶೇಖರ ಕಂಬಾರ, ವಿಜ್ಞಾನ ಕ್ಷೇತ್ರದಿಂದ ಡಾ. ವಿ.ಜಿ. ತಳವಾರ ಹಾಗೂ ಕವಿವಿ ಎಮರಿಟೀಸ್ ಪ್ರಾಧ್ಯಾಪಕ ಪ್ರೊ.ಎನ್.ಎಂ. ಬುಜುರ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು.
ಇತ್ತೀಚೆಗೆ ಸಾಕಷ್ಟು ವಿವಾದ ಸೃಷ್ಟಿಸಿದ್ದ ಬೆಳಗು ಪಠ್ಯದ ಪ್ರಕರಣವೇ ಘಟನೆಗೆ ಕಾರಣ. ಸಮಾರಂಭದ ವೇದಿಕೆಯಲ್ಲಿ ಅಭ್ಯಾಸ ಸೂಚಿ ಮಂಡಳಿ ಅಧ್ಯಕ್ಷ, ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ನಾಯಕ ಸಮಾರಂಭದ ನೇತೃತ್ವ ವಹಿಸಿದ್ದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ನೇತೃತ್ವದಲ್ಲಿ ಸಮಾರಂಭ ನಡೆದರೆ ಬಹಿಷ್ಕರಿಸುವುದಾಗಿ ಕರ್ನಾಟಕ ಲಾ ಅಸೋಸಿಯೇಷನ್, ಸಂಶೋಧನ ವಿದ್ಯಾರ್ಥಿಗಳ ಸಂಘ ಸೇರಿ ಇನ್ನೂ ಕೆಲವರು ಮಂಗಳವಾರವೇ ಕುಲಸಚಿವರಿಗೆ ಪತ್ರ ನೀಡಿದ್ದರು. ಇನ್ನೂ ಕೆಲವರು ನಾಯಕ ಇರಲಿ ಎಂದು ಅಭಿಪ್ರಾಯಪಟ್ಟಿದ್ದರು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಸಮಾರಂಭದ ಸಮಯದಲ್ಲಿ ಪರ, ವಿರೋಧದ ಪ್ರತಿಭಟನೆ ನಡೆಯಬಹುದು ಎಂದು ಕವಿವಿಯಲ್ಲಿ ಪೊಲೀಸ್ ಅಧಿಕಾರಿಗಳು ಠಿಕಾಣಿ ಹೂಡಿದ್ದರು. ಪೊಲೀಸ್ ಬಂದೋಬಸ್ತ್ನಲ್ಲೇ ಕಾರ್ಯಕ್ರಮ ನಡೆಸಲು ಕವಿವಿ ನಿರ್ಧರಿಸಿತ್ತು. ಆದರೆ ಇದಕ್ಕೆ ವಿದ್ಯಾರ್ಥಿಗಳು ಜಗ್ಗದ ಕಾರಣ ಕವಿವಿ ಅಧಿಕಾರಿಗಳು ಸುಮಾರು 2 ಗಂಟೆಗಳ ಕಾಲ ಸಭೆ ಪರ, ವಿರೋಧ ಮಾಡಿದವರೊಂದಿಗೆ ಚರ್ಚೆ ನಡೆಸಿದರು. ಆದರೆ ಇಬ್ಬರೂ ಒಮ್ಮತಕ್ಕೆ ಬರಲಿಲ್ಲ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂಬ ಕಾರಣಕ್ಕೆ ಸಮಾರಂಭ ಮುಂದೂಡಲು ನಿರ್ಧರಿಸಿದರು.
ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದ ಡಾ. ಚಂದ್ರಶೇಖರ ಕಂಬಾರ, ಡಾ. ವಿ.ಜಿ. ತಳವಾರ ಹಾಗೂ ಪ್ರೊ.ಎನ್.ಎಂ. ಬುಜುರ್ಕೆ ಅವರು ಕವಿವಿ ನಿರ್ಧಾರದಿಂದ ಬೇಸತ್ತು ಹೊರ ನಡೆದರು.
* ಪ್ರಶಸ್ತಿ ಸ್ವೀಕರಿಸಲು ಡಾ. ಚಂದ್ರಶೇಖರ ಕಂಬಾರ ಸಮಯಕ್ಕೆ ಸರಿಯಾಗಿ ಕವಿವಿಗೆ ಆಗಮಿಸಿದ್ದರು. ಆದರೆ ಈ ಗಲಾಟೆ ಹಿನ್ನೆಲೆಯಲ್ಲಿ ಉಪ ಕುಲಪತಿ ಕೊಠಡಿಯಲ್ಲಿ ಕೂಡಿಸಲಾಗಿತ್ತು. ಸುಮಾರು 12.30ರ ಸುಮಾರಿಗೆ ಕಾರ್ಯಕ್ರಮ ಮುಂದೂಡಿಕೆಗೆ ನಿರ್ಧರಿಸಲಾಯಿತು. ಆಗ ಬೇಸರದಿಂದಲೇ ಕಂಬಾರ ಹೊರ ನಡೆದರು. ಆದರೆ ಕವಿವಿ ಅಧಿಕಾರಿಗಳು ಕಂಬಾರ ಅವರಿಗೆ ಆರೋಗ್ಯ ಸಮಸ್ಯೆ ಇದೆ. ವೈದ್ಯರ ಬಳಿ ಕರೆದುಕೊಂಡು ಹೋಗಲಾಗುವುದು ಎಂದು ಸುದ್ದಿ ಹರಡಿಸಿದ್ದಾರೆ. ಇದು ಎಲ್ಲೆಡೆ ಹರಡುತ್ತಿದ್ದಂತೆ ಕಂಬಾರರ ಆಪ್ತರು ಆರೋಗ್ಯ ವಿಚಾರಣೆಗೆ ದೂರವಾಣಿ ಕರೆ ಮಾಡಲು ಆರಂಭಿಸಿದ್ದಾರೆ. ಇದು ಕಂಬಾರರಿಗೆ ಮತ್ತಷ್ಟು ಬೇಸರ ತರಿಸುವಂತಾಗಿದೆ.