ಪೋಡಿಮುಕ್ತ ಗ್ರಾಮಕ್ಕೆ ಸಹಕಾರ ಅಗತ್ಯ

1
Published on

ಹುಕ್ಕೇರಿ: ಬಹು ದಿನಗಳಿಂದ ಬಾಕಿ ಉಳಿದ ಪಹಣಿ ಸಮಸ್ಯೆ ಪರಿಹರಿಸಿ ಪೋಡಿ ಮಾಡುವ ಮೂಲಕ ಪ್ರತಿ ರೈತರ ಹೆಸರಿನಲ್ಲಿ ದಾಖಲಾತಿ ದೊರೆಯುವ ವ್ಯವಸ್ಥೆಯಾಗಲಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ತಾಲೂಕಿನ ಬೆಳವಿ ಗ್ರಾಮ ಪಂಚಾಯಿತಿಯಲ್ಲಿ ಭೂ ಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಸಹಾಯಕ ನಿರ್ದೇಶಕರ ಕಚೇರಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೋಡಿಮುಕ್ತ ಗ್ರಾಮ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಪೋಡಿಮುಕ್ತ ಗ್ರಾಮ ಮಾಡಲು ಅಧಿಕಾರಿಗಳು ರೈತರ ಮನೆ ಮನೆಗೆ ಭೇಟಿ ನೀಡಿ ಜಂಟಿ ಖಾತೆದಾರರನ್ನು ಬೇರ್ಪಡಿಸಿ ಹೊಲದ ಹದ್ದು ಬಸ್ತಿ ಹಾಗೂ ಪೋಡಿ ನಕ್ಷೆ ಮಾಡಿ ಪ್ರತಿಯೊಬ್ಬ ರೈತರಿಗೂ ಸೌಲಭ್ಯ ದೊರೆಯುವ ವ್ಯವಸ್ಥೆ ಮಾಡಲಿದ್ದಾರೆ. ರೈತರು ವೈಯಕ್ತಿಕ ತಕರಾರುಗಳನ್ನು ಬಿಟ್ಟು ಪೋಡಿಮುಕ್ತ ಗ್ರಾಮಕ್ಕೆ ಸಹಕರಿಸಬೇಕು ಎಂದರು.

ತಾಲೂಕು ಭೂ ದಾಖಲಾತಿಯ ಸಹಾಯಕ ನಿರ್ದೇಶಕ ತನ್ವಿನ್ ಢಾಂಗೆ ಮಾತನಾಡಿ, ರೈತರು ಪೋಡಿಗಾಗಿ ಅರ್ಜಿ ಸಲ್ಲಿಸಬೇಕಿಲ್ಲ. ಕೋರ್ಟ್‌ನಲ್ಲಿ ತಕರಾರು ಇದ್ದವರನ್ನು ಹೊರತುಪಡಿಸಿ ಉಳಿದೆಲ್ಲ ರೈತರಿಗೆ ಪೋಡಿ ಮಾಡಿ ಪಹಣಿಪತ್ರ ನೀಡಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಪಾರ್ವತಿ ಚಿಕ್ಕಣಗಿ, ಉಪಾಧ್ಯಕ್ಷೆ ಶೋಭಾ ಘಸ್ತಿ, ಸದಸ್ಯರಾದ ಸತ್ಯಪ್ಪ ನಾಯಿಕ, ಜಯಶ್ರೀ ಸತ್ಯಾಯಿಗೋಳ, ಶೋಭಾ ಮಗದುಮ್, ಚನಮಲ್ಲ ನಾಯಿಕ, ರಾಮಣ್ಣ ತೇರದಾಳಿ, ವಿಠ್ಠಲ ಅವುಬಾಯಿಗೋಳ, ಮುಖಂಡರಾದ ಮಲ್ಲಪ್ಪ ನಾಯಿಕ, ಅಪ್ಪಾಸಾಹೇಬ ಸಾರಪುರೆ, ಅಜಿತಕುಮಾರ ನಾಯಿಕ, ರಾಮಣ್ಣ ಬಾಳಿಕಾಯಿ, ಹೊನ್ನಪ್ಪ ನಾಯಿಕ, ಸಂಜೀವ ನಾಯಿಕ, ಲಿಂಗರಾಜ ನಾಯಿಕ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪುರೆ, ಗ್ರಾಮ ಆಡಳಿತಾಧಿಕಾರಿ ನೇತ್ರಾವತಿ ನಾಯಕ, ಪಿಡಿಒ ಶೀಲಾ ತಳವಾರ, ಟಿ.ಎಸ್. ಜಮಾದಾರ, ವಿ.ಬಿ. ಗಾಯಕವಾಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net