

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕಳೆದ ಡಿಸೆಂಬರ್ ನಲ್ಲಿ ದರಖಾಸ್ತು ಪೋಡಿ ಅಭಿಯಾನ ಆರಂಭವಾಗಿ ರಾಜ್ಯಾದ್ಯಂತ ಇದುವರೆಗೂ ಅಂದಾಜು 5 ಸಾವಿರ ಪೋಡಿ ದುರಸ್ತಿ ಆಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1236 ಪೋಡಿ ದುರಸ್ತಿ ಆಗಿದ್ದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ದೇವನಹಳ್ಳಿ ತಾಲೂಕು ವಿಶ್ವನಾಥಪುರದಲ್ಲಿ ಆಯೋಜಿಸಿದ್ದ ದರಖಾಸ್ತು ಪೋಡಿ ಅಭಿಯಾನ ಹಾಗೂ ಹೊಸ ದಾಖಲೆ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಪೋಡಿ ದುರಸ್ತಿ ರೈತರ ಬಹುದೊಡ್ಡ ಸಮಸ್ಯೆ ಆಗಿತ್ತು. ಸರಳೀಕರಣ ಪೋಡಿ ಅಭಿಯಾನ ಕೈಗೊಳ್ಳಲು ವರ್ಷಗಳ ಪೂರ್ವ ಸಿದ್ಧತೆ ನಡೆಸಿ ಕಳೆದ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಯಿತು. ಕಳೆದ 50-60 ವರ್ಷಗಳ ಹಿಂದೆ ಮಂಜೂರಾದ ಜಮೀನುಗಳಿಗೆ ಈಗ ಪೋಡಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಂದಾಜು 50 ಸಾವಿರ ರೈತರಿಗೆ ಜಮೀನು ಮಂಜೂರಾಗಿದ್ದು, 18 ಸಾವಿರ ರೈತರ ಬಳಿ ಪೋಡಿ ದುರಸ್ತಿಗೆ ಪೂರಕ ದಾಖಲೆಗಳಿವೆ. ಪೂರಕ ದಾಖಲೆಗಳು ಇಲ್ಲದಿರುವ ಜಮೀನುಗಳಿಗೆ ಮಿಸ್ಸಿಂಗ್ ಕಮಿಟಿ ಮುಂದೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಭೂ ದಾಖಲೆಗಳ ಡಿಜಟಲೀಕರಣ:
ಭೂ ದಾಖಲೆಗಳ ನಾಪತ್ತೆ, ಅಕ್ರಮ ವರ್ಗಾವಣೆ, ಅಕ್ರಮ ತಿದ್ದುಪಡಿ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. ಭೂ ಸುರಕ್ಷಾ ಯೋಜನೆಯಡಿ ರಾಜ್ಯದಲ್ಲಿರುವ ಎಲ್ಲ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮನೆಯಲ್ಲಿ ಕೂತು ನಿಮ್ಮ ಜಮೀನುಗಳ ದಾಖಲೆಗಳನ್ನು ನೋಡಬಹುದಾಗಿದೆ. ಇದರಿಂದ ಪೋಡಿ ದುರಸ್ತಿಗೂ ಸಹಾಯವಾಗುತ್ತದೆ ಎಂದು ಸಚಿವರು ತಿಳಿಸಿದರು.
ವಿಶೇಷ ಅಭಿಯಾನ: ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಿ ಸಾಕಷ್ಟು ವರ್ಷ ಕಳೆದರೂ ಇದುವರೆಗೂ ಪೋಡಿ ಆಗಿರಲಿಲ್ಲ. ಈಗ ರಾಜ್ಯ ಸರ್ಕಾರ ಕೈಗೆತ್ತಿಕೊಂಡು ವಿಶೇಷ ಅಭಿಯಾನದ ಮೂಲಕ ದರಖಾಸ್ತು ಪೋಡಿ ದುರಸ್ತಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಬಯಲು ಸೀಮೆ ಪ್ರದೇಶಗಳಲ್ಲಿ ಸಾಕಷ್ಟು ಜೀವಂತ ಕೆರೆಗಳಿವೆ, ಕೆರೆಗಳಲ್ಲಿ ಮಣ್ಣು ಹೂಳೆತ್ತುವ ಕೆಲಸ ಆಗಬೇಕು. ಕೆರೆಗಳಲ್ಲಿ ಹೂಳೆತ್ತುವುದರಿಂದ ಬಾವಿ, ಕೊಳವೆ ಬಾವಿಗಳಲ್ಲಿ ನೀರು ಬಂದು ರೈತರ ಬದುಕು ಹಸನಾಗುತ್ತದೆ ಎಂದರು.