ಸಕ್ರಿ ಕಾಲೇಜಿನಲ್ಲಿ ಪೋಕ್ಸೋ ಕಾನೂನು ಜಾಗೃತಿ

IMG_20241109_204349_940.jpg
Published on

ಹುಬ್ಬಳ್ಳಿ:ಇಲ್ಲಿಯ ಹೆಗ್ಗೇರಿ ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯ ಮತ್ತು ಶ್ರೀಮಂಜುನಾಥೇಶ್ವರ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದೊಂದಿಗೆ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.

ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಸಾಜೀದ್ ಹುಸೇನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇಂತಹ ಕಾನೂನು ಜಾಗೃತಿ ಕಾರ್ಯಕ್ರಮಗಳ ಮೂಲಕ ಯುವಕರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಲಿದೆ ಎಂದರು.

ಜೆಎಸ್ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿ ಪ್ರೊ. ದೀಪಾ ಪಾಟೀಲ, ಮಹಿಳೆಯರ ಸಂವಿಧಾನಾತ್ಮಕ ಹಕ್ಕುಗಳು ಮತ್ತು ಜನಸಾಮಾನ್ಯರಿಗೆ ಕಾನೂನು ಅರಿವು ವಿಷಯ ಕುರಿತು ಮಾತನಾಡಿದರು. ಸಂವಿಧಾನದಡಿಯಲ್ಲಿ ಪ್ರತಿಯೊಬ್ಬ ಮಹಿಳೆಗೆ ದೌರ್ಜನ್ಯಗಳನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ರೂಪಿಸಲಾಗಿದೆ. ಸಂವಿಧಾನದ ನಿರ್ದೇಶಕ ತತ್ವಗಳು ಮಹಿಳೆಯರ ಸಕಾಲಿಕ ಅಭಿವೃದ್ಧಿ ಮತ್ತು ರಕ್ಷಣೆಯನ್ನು ಎತ್ತಿ ಹಿಡಿದಿದೆ ಎಂದು ತಿಳಿಸಿದರು.

ಸಹಾಯಕ ಪ್ರಾಧ್ಯಾಪಕಿ ಪ್ರೊ. ಪೂರ್ಣಿಮಾ ಕುರ್ಡಿಕೇರಿ ಮಾತನಾಡಿ, ಲೈಂಗಿಕ ಅಪರಾಧಗಳಿಂದ ಮುಕ್ತಿ ಹೊಂದಲು ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಹೇಗೆ ಕೆಲಸ ಮಾಡಲಿದೆ ಎಂಬುದನ್ನು ವಿವರಿಸಿದರು.

ಮಕ್ಕಳ ಮೇಲೆ ಎಸಗುವ ದೌರ್ಜನ್ಯದ ವಿರುದ್ಧ ರಕ್ಷಣೆ ನೀಡಲು ರಚಿಸಿರುವ ಸಮಗ್ರ ಮತ್ತು ಅತ್ಯಂತ ಕಠಿಣ ಕಾನೂನು ಇದಾಗಿದೆ. ಈ ಕಾಯ್ದೆ ಮಗು ಸ್ನೇಹಿಯಾಗಿದೆ. ಇದರಡಿ ಮಕ್ಕಳ ಗೌಪ್ಯತೆ ಮತ್ತು ಗೌರವವನ್ನು ಕಾಯುವಂತೆ ಕಾನೂನುಗಳ ತಿದ್ದುಪಡಿ ಮಾಡಲಾಗಿದೆ. ಸಮಾಜದಲ್ಲಿ ಮಕ್ಕಳ ಸಾಂಸ್ಥಿಕ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಹೆಚ್ಚಿಸುತ್ತದೆ ಎಂದರು.

ಮಕ್ಕಳ ರಕ್ಷಣೆ ಪರ ನಿಲ್ಲಲು ಎಲ್ಲರೂ ಬದ್ಧ ಎಂದು ಪ್ರತಿಜ್ಞೆ ಬೋಧಿಸಲಾಯಿತು. ಸುರೇಶ ಲಿಂಬಿಕಾಯಿ, ಜೆಎಸ್ಎಸ್ ಸಕ್ರಿ ಕಾನೂನು ಹಾಗೂ ಮಂಜುನಾಥೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು. ಗೌರಮ್ಮ ಹೊಸಮನಿ ಪ್ರಾರ್ಥನೆ ಹಾಡಿದರು. ಸುಧಾ ಸಾಲಿಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net