ಫೋಕ್ಸೊ ಪ್ರಕರಣ, ಅಕ್ರಮ ಬಂಧನ, ತನಿಖೆ ನಡೆಸಿ ವರದಿ ಸಲ್ಲಿಸಿ

Published on

ಮುದ್ದೇಬಿಹಾಳ: ಪಟ್ಟಣದ ಪೊಲೀಸ್ ಠಾಣೆಯ ಪೋಕ್ಸೊ ಪ್ರಕರಣದ ತನಿಖಾಧಿಕಾರಿ ಪೋಕ್ಸೊ ಪ್ರಕರಣವೊಂದರ ಆರೋಪಿಯನ್ನು ಅಕ್ರಮ ಬಂಧನದಲ್ಲಿ (ಇಲ್ಲೀಗಲ್ ಡಿಟೆನ್ಷನ್) ಇಟ್ಟುಕೊಂಡಿರುವ ಕುರಿತು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾ ಹೆಚ್ಚುವರಿ ಫಾಸ್ಟ್ ಟ್ರಾೃಕ್ ವಿಶೇಷ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ವಿಶೇಷ ನ್ಯಾಯಾಧೀಶರು (ಎಡಿಎಸ್‌ಜೆ) ನಿರ್ದೇಶನ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಎಫ್‌ಐಆರ್ ಆದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ಕಳೆದ 2024ರ ಡಿಸೆಂಬರ್ 28 ರಂದು ವಿಜಯಪುರದ ನ್ಯಾಯಾಧೀಶರ ಮುಂದೆ ಅವರ ಗೃಹಕಚೇರಿಯಲ್ಲಿ ಹಾಜರುಪಡಿಸಿ ಆರೋಪಿಯನ್ನು ರಿಮ್ಯಾಂಡ್‌ಗೆ ಕೊಡುವಂತೆ ಕೋರಿದ್ದರು.

ಆರೋಪಿಯನ್ನು ವೈಯಕ್ತಿಕ ವಿಚಾರಣೆ ನಡೆಸುವಾಗ ತನ್ನನ್ನು 2024ರ ಡಿ.25 ರಂದು ಪೊಲೀಸರು ಬಂಧಿಸಿದ್ದಾಗಿ ಆರೋಪಿಯು ನ್ಯಾಯಾಧೀಶರು ಎದುರು ತಿಳಿಸಿದ್ದ. ಪೊಲೀಸರ ಕೋರಿಕೆ ಪರಿಗಣಿಸಿ ಜ.6 ರವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿ ಹೆಚ್ಚಿನ ತನಿಖೆಗೆ ಪೊಲೀಸರಿಗೆ ಅವಕಾಶ ನೀಡಿದ್ದರು.

ಆರೋಪಿ ಹೇಳಿದ ಬಂಧನದ ದಿನ ಮತ್ತು ಪೊಲೀಸರು ಆರೋಪಿಯನ್ನು ತಮ್ಮ ಎದುರು ಹಾಜರುಪಡಿಸಿದ ದಿನಗಳ ವ್ಯತ್ಯಾಸ ಅರಿತ ನ್ಯಾಯಾಧೀಶರು ಬಂಧನದ ನಂತರ ತಮ್ಮ ಬಳಿ ರಿಮ್ಯಾಂಡ್‌ಗಾಗಿ ತರಲು 4 ದಿನಗಳ ವ್ಯತ್ಯಾಸ ಇರುವುದನ್ನು ಮನಗಂಡರು. ಕಾನೂನು ಪ್ರಕಾರ ಆರೋಪಿಯನ್ನು ಬಂಧಿಸಿದ 24 ಗಂಟೆಯೊಳಗೆ ಪೊಲೀಸರು ಆತನನ್ನು ಸಂಬಂಧಿಸಿದ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಿತ್ತು.

ಆದರೆ ತನಿಖಾಧಿಕಾರಿ 4 ದಿನ ಆತನನ್ನು ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡಿದ್ದಾರೆ ಎನ್ನುವುದು ಖಚಿತಪಡಿಸಿಕೊಂಡ ನ್ಯಾಯಾಧೀಶರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿ ಅಕ್ರಮ ಬಂಧನ (ಇಲ್ಲೀಗಲ್ ಡಿಟೆನ್ಷನ್) ಕುರಿತು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net