ಪೋಕ್ಸೊ ಪ್ರಕರಣ ಸಾಬೀತು ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಅಪ್ರಾಪ್ತ ಬಾಲಕಿಯ ಎದುರು ಅಶ್ಲೀಲವಾಗಿ ವರ್ತಿಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ಎ್ಟಿಎಸ್‌ಸಿ -1ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು 5 ವರ್ಷಗಳ ಸಾಮಾನ್ಯ ಸಜೆ ವಿಧಿಸಿ ತೀರ್ಪುನೀಡಿದ್ದಾರೆ.


ಬಡಗಕಜೆಕಾರು ಗ್ರಾಮದ ಅಬ್ದುಲ್ ಕರೀಂ ಎಂಬವರ ಪುತ್ರ ಹೈದರ್ (25) ಶಿಕ್ಷೆಗೊಳಗಾದವ.


ಪ್ರಕರಣದ ಹಿನ್ನೆಲೆ: 2020ರ ಮೇ 30ರಂದು ಮಧ್ಯಾಹ್ನ 2.30ರ ವೇಳೆಗೆ ಬಡಗಕಜೆಕಾರು ಗ್ರಾಮದ ನಿವಾಸಿಯಾಗಿರುವ ಹೈದರ್ ತನ್ನ ಮನೆಗೆ ಎರಡು ಹೋರಿ ಕರುಗಳನ್ನು ಸಾಕಲು ತೆಗೆದುಕೊಂಡು ಹೋಗುತ್ತಿದ್ದಾಗ ಒಂದು ಕರು ಆಯಾಸವಾಗಿ ರಸ್ತೆಯಲ್ಲಿ ಬಿದ್ದಿದೆ. ಅದಕ್ಕೆ ನೀರು ಕುಡಿಸುವ ಉದ್ದೇಶದಿಂದ ಒಂದು ಬಕೆಟ್ ನೀರು ಕೊಡುವಂತೆ ಅಲ್ಲಿಯೇ ಪಕ್ಕದಲ್ಲಿದ್ದ ಮನೆಯ ಮುಂದೆ ನಿಂತಿದ್ದ ವ್ಯಕ್ತಿಯಲ್ಲಿ (ಅಪ್ರಾಪ್ತ ಬಾಲಕಿಯ ತಂದೆ)ಯಲ್ಲಿ ಕೇಳಿದ್ದ. ಅವರು ಮಗಳ ಬಳಿ ಆತನಿಗೆ ನೀರು ಕೊಡುವಂತೆ ಹೇಳಿದ್ದು, ಆಕೆ, ಮನೆಯ ಬದಿಯಲ್ಲಿರುವ ಶೌಚಗೃಹದಿಂದ ಒಂದು ಬಕೆಟ್ ನೀರು ತುಂಬಿಸಿ ಅದನ್ನು ತೆಗೆದುಕೊಂಡು ಹೋಗಿ ಆತನಿಗೆ ನೀಡಿದ್ದಳು. ಅದಕ್ಕೆ ಪ್ರತಿಯಾಗಿ ಆತ 10 ರೂ. ನೀಡಿದ್ದು, ಅದನ್ನು ಬೇಡವೆಂದು ತಿರಸ್ಕರಿಸಿದಾಗ ಆತ ಕೈ ಹಿಡಿದು ಎಳೆದು, ಹತ್ತಿರ ನಿಲ್ಲಿಸಿ ಪ್ಯಾಂಟ್ ಜಾರಿಸಿ, ಮರ್ಮಾಂಗವನ್ನು ತೋರಿಸಿ ನಗುತ್ತಾ, ನಾಳೆ ಬರುತ್ತೇನೆ ಎಂದು ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ಆಕೆ ತಂದೆಯನ್ನು ಕೂಗಿ ಕರೆದಾಗ, ಯಾರಲ್ಲೂ ಹೇಳಬೇಡ, ಹೇಳಿದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣದ ತನಿಖಾಧಿಕಾರಿಯಾಗಿದ್ದ ಪುಂಜಾಲಕಟ್ಟೆ ಠಾಣೆಯ ಎಸ್‌ಐ ಸೌಮ್ಯಾ ಜೆ.ಅವರು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.


ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 354ರ ಅಡಿ 1 ವರ್ಷ ಸಾಮಾನ್ಯ ಸಜೆ ಮತ್ತು 10 ಸಾವಿರ ರೂ. ದಂಡ, ದಂಡ ಪಾವತಿಸಲು ವಿಲನಾದರೆ ಹೆಚ್ಚುವರಿಗೆ 3 ತಿಂಗಳು ಸಾಮಾನ್ಯ ಸಜೆ. ಕಲಂ 506ರಡಿ 1 ವರ್ಷ ಸಾಮಾನ್ಯ ಸಜೆ ಮತ್ತು 10 ಸಾವಿರ ರೂ. ದಂಡ, ದಂಡ ಪಾವತಿಸಲು ವಿಲನಾದರೆ ಹೆಚ್ಚುವರಿ 3 ತಿಂಗಳು ಸಾಮಾನ್ಯ ಸಜೆ. ಪೋಕ್ಸೋ ಕಾಯ್ದೆ ಕಲಂ 10ರಡಿ 5 ವರ್ಷ ಸಾಮಾನ್ಯ ಸಜೆ ಮತ್ತು 15 ಸಾವಿರ ರೂ. ದಂಡ, ದಂಡ ತೆರಲು ವಿಲನಾದರೆ 6 ತಿಂಗಳು ಹೆಚ್ಚುವರಿ ಸಾಮಾನ್ಯ ಸಜೆ ವಿಧಿಸಿ ಜ.24ರಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೊಂದ ಬಾಲಕಿಗೆ 50 ಸಾವಿರ ರೂ. ಪರಿಹಾರ ಧನ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net