

ಮಂಗಳೂರು: ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ(ಎಫ್‌ಟಿಎಸ್‌ಸಿ-1)(ಪೋಕ್ಸೊ) ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು 20 ವರ್ಷಗಳ ಕಠಿನ ಸಜೆ ವಿಧಿಸಿ ತೀರ್ಪು ವಿಧಿಸಿದ್ದಾರೆ.
ಬಾಗಲಕೋಟೆ ಹಾರ್ದೊಳ್ಳಿಯ ಶ್ರೀಕಾಂತ್ ಹನುಮಂತ ಶಿಕ್ಷೆಗೊಳಗಾದವನು. ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕರಂಬಾರು ಗ್ರಾಮದ ಬಾಕ್ಸ್ ಕಂಪೆನಿಯೊಂದರ ಶೆಡ್‌ನಲ್ಲಿ ಬಾಲಕಿ ತನ್ನ ಪಾಲಕರ ಜತೆ ವಾಸವಾಗಿದ್ದಳು. ಅಲ್ಲಿಯೇ ಪಕ್ಕದ ಶೆಡ್‌ನಲ್ಲಿ ಆರೋಪಿ ಕೂಡ ವಾಸವಾಗಿದ್ದ. ಬಾಲಕಿಯ ಪಾಲಕರು ಮನೆಯಲ್ಲಿ ಇಲ್ಲದ ಸಂದರ್ಭ ಆರೋಪಿ ಆಕೆಯ ಬಳಿ ಬಂದು ಪ್ರೀತಿಸುವುದಾಗಿ ನಂಬಿಸಿ 2019ರ ಎ.12ರಿಂದ ಹಲವು ಬಾರಿ ಅತ್ಯಾಚಾರವೆಸಗಿದ್ದ. ಅಲ್ಲದೆ ತನ್ನ ಮೊಬೈಲ್‌ನಲ್ಲಿ ಪೊಟೋಗಳನ್ನು ತೆಗೆದು ಅತ್ಯಾಚಾರದ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಒಮ್ಮೆ ಶಾಲೆಗೆ ಹೋಗಿದ್ದ ಬಾಲಕಿ ಅನಾರೋಗ್ಯಕ್ಕೀಡಾದಾಗ ಪರೀಕ್ಷಿಸಿದ ವೇಳೆ ಆಕೆ ಗರ್ಭಿಣಿಯಾಗಿರುವುದು ಗೊತ್ತಾಗಿತ್ತು. ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಎಸಿಪಿ ಶ್ರೀನಿವಾಸ ಗೌಡ ಆರ್. ಪ್ರಾಥಮಿಕ ತನಿಖೆ ನಡೆಸಿದ್ದರು. ಎಸಿಪಿ ಬೆಳ್ಳಿಯಪ್ಪ ಕೆ.ಯು. ತನಿಖೆ ಮುಂದುವರಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಭಾರತೀಯ ದಂಡಸಂಹಿತೆ ಕಲಂ 376 (2)(ಎನ್) ಅಡಿಯಲ್ಲಿ 10 ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳು ಕಠಿನ ಸಜೆ, ಕಲಂ 376(3) ಅಡಿಯಲ್ಲಿ 20 ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 3 ತಿಂಗಳ ಕಠಿನ ಸಜೆ, ಕಲಂ 506ರ ಅಡಿಯಲ್ಲಿ 1 ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ 10.50 ಲ.ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದ್ದಾರೆ.
ಆರಂಭದಲ್ಲಿ ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಅವರು ವಿಚಾರಣೆ ನಡೆಸಿ, ಮುಂದಿನ ವಿಚಾರಣೆ ಮತ್ತು ವಾದವನ್ನು ವಿಶೇಷ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ಮಂಡಿಸಿದ್ದರು.