ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ

judge
Published on

ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೋ) ಎಫ್‌ಟಿಎಸ್‌ಸಿ-1 ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ಕೊಕ್ಕಡದ ಪದ್ಮನಾಭ ಶಿಕ್ಷೆಗೊಳಗಾದವನು. 2019ರ ಆ.17ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳು ತನ್ನ ಗೆಳತಿಯೊಂದಿಗೆ ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದಳು. ಗೆಳತಿ ಆಕೆಯ ಮನೆಯ ಕಡೆಗೆ ತೆರಳಿದಳು. ಈ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದ ಆರೋಪಿ ಲೈಂಗಿಕ ಉದ್ದೇಶದಿಂದ ಆಕೆಯ ಮಾನಕ್ಕೆ ಕುಂದುಂಟಾಗುವಂತೆ ಆಕೆಯ ಕೈ ಹಿಡಿದು ಎಳೆದಿದ್ದ. ಆಕೆ ಬಿಡಿಸಿಕೊಂಡು ಗೆಳತಿಯ ಮನೆಯ ಕಡೆಗೆ ಹೋಗಿ ಗೆಳತಿಯನ್ನು ಕೂಗಿ ಕರೆದಿದ್ದಳು. ಆಕೆಯ ಗೆಳತಿ ಆಕೆಯ ತಂದೆಗೆ ವಿಷಯ ತಿಳಿಸಿದಳು. ಆರೋಪಿ ಆಕೆಯ ಮನೆಗೂ ಬಂದು ಆಕೆಯ ತಂದೆಗೆ ಅವಾಚ್ಯವಾಗಿ ಬೈದಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿ ಧರ್ಮಸ್ಥಳ ಪೊಲೀಸ್ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೊಕ್ಸೋ) ಎಫ್‌ಟಿಎಸ್‌ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಆರೋಪಿ ತಪ್ಪಿತಸ್ಥನೆಂದು ರುಜುವಾತಾಗಿದೆ ಎಂದು ತೀರ್ಪು ನೀಡಿದ್ದಾರೆ. ಆರೋಪಿಗೆ ಪೊಕ್ಸೋ ಕಾಯಿದೆಯ ಕಲಂ 12ರಡಿ 3 ವರ್ಷ ಸಾದಾ ಸಜೆ ಮತ್ತು 500 ರೂ. ದಂಡ, ಐಪಿಸಿ ಸೆಕ್ಷನ್ 354(ಡಿ)ಪ್ರಕಾರ ಮೂರು ವರ್ಷ ಸಾದಾ ಸಜೆ ಮತ್ತು 500 ರೂ ದಂಡ ಹಾಗೂ ಐಪಿಸಿ 341ರಂತೆ 1 ವರ್ಷ ಸಜೆ ವಿಧಿಸಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ ಪರಿಹಾರ ನೀಡುವಂತೆಯೂ ಆದೇಶಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net