ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಅಪರಾಧಿಗೆ 3 ವರ್ಷ ಜೈಲು

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ -1(ಪೋಕ್ಸೋ) ನ್ಯಾಯಾಲಯ 3 ವರ್ಷಗಳ ಸಾದಾ ಸಜೆ ಮತ್ತು 10,000 ರೂ. ದಂಡ ವಿಧಿಸಿ ಜು.11ರಂದು ತೀರ್ಪು ನೀಡಿದೆ.


ಬಂಟ್ವಾಳ ಗೋಳ್ತಮಜಲು ಸತೀಶ್ ಕುಲಾಲ್ ಶಿಕ್ಷೆಗೊಳಗಾದವನು. 2019ರ ಆ.30ರಂದು ಸಂಜೆ ಬಾಲಕಿ ಬಸ್‌ನಲ್ಲಿ ವಿಟ್ಲದಿಂದ ಮನೆಗೆ ಹೋಗುತ್ತಿದ್ದಳು. ಆರೋಪಿ ಕೂಡ ಅದೇ ಬಸ್‌ನಲ್ಲಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದ. ಇದನ್ನು ಗಮನಿಸಿದ ಬಾಲಕಿ ಕೆದುವಾರು ಬಸ್ ತಂಗುದಾಣದ ಬಳಿ ಇಳಿದು ನಡೆದುಕೊಂಡು ಹೋಗುವಾಗ ಆರೋಪಿ ಹಿಂದಿನಿಂದ ಹಿಡಿದು ಲೈಂಗಿಕ ಕಿರುಕುಳ ನೀಡಿದ್ದ. ಬಾಲಕಿ ಬೊಬ್ಬೆ ಹಾಕಿದಾಗ ವಿಚಾರಿಸಿದ ವ್ಯಕ್ತಿಗೆ ಜೀವಬೆದರಿಕೆಯೊಡ್ಡಿ ಹಲ್ಲೆ ನಡೆಸಿದ್ದ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಯಲ್ಲಪ್ಪ ಎಸ್.ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ವಾದ ಮಂಡಿಸಿದ್ದರು.


ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಅಪರಾಧಿಗೆ ಪೊಕ್ಸೋ ಕಲಂ 8ರ ಅಡಿಯಲ್ಲಿ 3 ವರ್ಷ ಸಾದಾ ಸಜೆ, 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ 3 ತಿಂಗಳು ಹೆಚ್ಚುವರಿ ಸಾದಾ ಸಜೆ, ಐಪಿಸಿ ಕಲಂ 354ರ ಅಡಿ 1 ವರ್ಷ ಸಾದಾ ಸಜೆ, 5,000 ರೂ.ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ ಒಂದು ತಿಂಗಳು ಹೆಚ್ಚುವರಿ ಸಾದಾ ಸಜೆ, ಐಪಿಸಿ ಕಲಂ 506ರ ಅಡಿ 1 ವರ್ಷ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ 1 ಲ.ರೂ. ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net