ಪೋಕ್ಸೋ ಕಾಯ್ದೆಯ ಅರಿವು ಅಗತ್ಯ

POCSO
Published on

ನರಗುಂದ: ಮಕ್ಕಳ ಮೇಲೆ ನಡೆಯುವ ಲೈಂಗಿಕ ಅಪರಾಧ, ಶೋಷಣೆ, ಅತ್ಯಾಚಾರ ಪ್ರಕರಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತಡೆಗಟ್ಟುವುದು. ತಪ್ಪಿತಸ್ಥರರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು 2012 ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೊಳಿಸಲಾಗಿದೆ. ಆದರೆ, ಕಾಯ್ದೆ ಜಾರಿಗೊಂಡು ದಶಕಗಳೇ ಕಳೆದರೂ ಅಪರಾಧ ಚಟುವಟಿಕೆ ಇನ್ನೂ ಹತೋಟಿಗೆ ಬಾರದಿರುವುದು ವಿಷಾಧಕರ ಸಂಗತಿ ಎಂದು ದಿವಾಣಿ ನ್ಯಾಯಾಧೀಶೆ ಗಾಯತ್ರಿ ಎಚ್.ಡಿ. ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ನವೋದಯ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೋಕ್ಸೋ ಕಾಯ್ದೆ, ಮಕ್ಕಳ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶ ಸಾಕಷ್ಟು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಶೋಷಣೆ ಪ್ರಕರಣಗಳು ಮಾತ್ರ ಇನ್ನೂ ನಿಂತಿಲ್ಲ. ಪೋಕ್ಸೋ ಕಾಯ್ದೆ ಬಗ್ಗೆ ಮಕ್ಕಳು, ಪೋಷಕರು, ಶಿಕ್ಷಕರಲ್ಲಿ ಸಮರ್ಪಕವಾಗಿ ಅರಿವಿಲ್ಲದ ಕಾರಣ ಬಹುತೇಕ ಪ್ರಕರಣಗಳು ವರದಿಯೇ ಆಗುವುದಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. 2019ರ ಕಾಯ್ದೆ ತಿದ್ದುಪಡಿಯಿಂದಾಗಿ ಆರೋಪಿಗಳಿಗೆ ದಂಡ ವಿಧಿಸುವುದರ ಜತೆಗೆ 10 ವರ್ಷಕ್ಕಿಂತ ಹೆಚ್ಚು ಕಠಿಣ ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ರಾಜು ಮಾತನಾಡಿ, ಮಕ್ಕಳು ಮಿತಿಮೀರಿ ಮೊಬೈಲ್ ಬಳಸುವುದರಿಂದ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಪೋಷಕರು ತಮ್ಮ ಮಕ್ಕಳ ಕೈಗೆ ಮೊಬೈಲ್ ಕೊಡುವುದರ ಬದಲು ಪುಸ್ತಕ ಕೊಟ್ಟು ಓದಿನ ಹವ್ಯಾಸ ಬೆಳೆಸಬೇಕು ಎಂದರು.
ನವೋದಯ ಶಾಲೆ ಮುಖ್ಯೋಪಾಧ್ಯಾಯ ಆರ್.ಎಸ್. ಪವಾರ, ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಎಸ್. ಹುಕ್ಕೇರಿ, ವಕೀಲ ಎಂ.ಬಿ. ಕುಲಕರ್ಣಿ, ಆರ್.ಆರ್. ನಾಯ್ಕರ, ಜೆ.ಸಿ. ಭೋಗಾರ, ಶಕುಂತಲಾ ಗಣಿ, ಎಎಸ್‌ಐ ಡಿ.ಕೆ. ಹಾಲವರ, ಕೊಳ್ಳಿಯವರ, ಆರ್.ಟಿ. ಸೋಮಾಪೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net