

ಉಪ್ಪಿನಂಗಡಿ: ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಕ್ಸೋ ಕಾಯ್ದೆ ಅರಿವು ಎಲ್ಲ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಇರಲೇಬೇಕು. ಆಮಿಷಕ್ಕೆ ಒಳಗಾಗದಂತೆ ಪಾಲಕರು ಮಕ್ಕಳಿಗೆ ತಿಳಿಹೇಳಬೇಕು ಎಂದು ಸಬ್‌ಇನ್‌ಸ್ಪೆಕ್ಟರ್ ಅವಿನಾಶ್ ಹೇಳಿದರು.
ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆಯಲ್ಲಿ ನಡೆದ ಪೋಕ್ಸೋ ಕಾಯ್ದೆಯ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು. ದೌರ್ಜನ್ಯಕ್ಕೆ ಒಳಗಾದ ಸಂದರ್ಭ ಪೊಲೀಸ್ ಇಲಾಖೆಯನ್ನು ಸಂಪರ್ಕಿಸುವ ಹಾಗೂ ದೂರು ನೀಡುವ ಕುರಿತು ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಪ್ರತ್ಯೇಕ ಮಾಹಿತಿ ನೀಡಲಾಯಿತು. ಮಹಿಳಾ ಪೊಲೀಸ್ ಅಧಿಕಾರಿ ಕವಿತಾ, ಮುಖ್ಯಶಿಕ್ಷಕಿ ವೀಣಾ ಆರ್. ಪ್ರಸಾದ್ ಉಪಸ್ಥಿತರಿದ್ದರು. ಶಿಕ್ಷಕಿ ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.