

ದಾವಣಗೆರೆ: ಆಧುನಿಕ ತಂತ್ರಜ್ಞಾನದ ಯಾಂತ್ರೀಕೃತ ಬದುಕಿನಲ್ಲಿ ಭಾವನೆಗಳು ಸಾಯಬಾರದು. ವಿಚಾರಗಳು ಸಮೃದ್ಧವಾಗಿದ್ದು ಒಳ್ಳೆಯದನ್ನು ಹುಡುಕುವಲ್ಲಿ ಅಂತರ್ ದೃಷ್ಟಿ ಬೇಕು ಎಂದು ಬರಹಗಾರ ಪೊ›. ಪದ್ಮಣ್ಣ ಹಿರೇಗಿಡ್ಡಪ್ಪನವರ್ ಹೇಳಿದರು.
ತಾಲೂಕಿನ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲದಕ್ಕೂ ಕಂಪ್ಯೂಟರನ್ನೇ ಅವಲಂಬಿಸದೆ ಆಲೋಚನೆಯ ಲಹರಿಯಲ್ಲಿ ಬದುಕು ಕಟ್ಟಿಕೊಳ್ಳುವ ಹಾಗೂ ಕಟ್ಟಿ ಕೊಡುವ ಬಗೆಗೂ ಮುಂದಾಗಬೇಕು. ನೆನಪುಗಳನ್ನು ಮೆದುಳಿನಲ್ಲಿ ದಾಖಲಿಸಿಕೊಳ್ಳಬೇಕೇ ವಿನಃ ಮೆಮೊರಿ ಕಾರ್ಡ್ನಲ್ಲಿ ಇದೆ ಎಂದು ಉಪೇಕ್ಷಿಸಬಾರದು ಎಂದರು.
ಕಾಲೇಜಿನ ಚೇರ್ಮನ್ ಅಥಣಿ ಎಸ್. ವೀರಣ್ಣ ಮಾತನಾಡಿ, ಆಧುನಿಕ ತಂತ್ರಜ್ಞಾನದ ಪದವೀಧರರು ಪಾರಂಪರಿಕ ಸಾಹಿತ್ಯ ವೈಭವವನ್ನು ನಿರ್ಲಕ್ಷಿಸದೆ ಆಸಕ್ತಿ ತೋರಿಸಬೇಕು ಎಂದರು.
ಪ್ರಾಚಾರ್ಯ ಡಾ. ವೀರಪ್ಪನವರ ಉಪಸ್ಥಿತಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮುದ್ಯತಾ ಮತ್ತು ತಂಡದವರು ಪ್ರಾರ್ಥಿಸಿದರು. ಬಿ.ಎಂ. ಪ್ರಶಾಂತಿನಿ ಸ್ವಾಗತಿಸಿದರು. ಎಚ್. ನವೀನ್, ಎನ್. ಜ್ಯೋತಿ ಅತಿಥಿಗಳನ್ನು ಪರಿಚಯಿಸಿದರು. ಕೆ.ವೈ. ವೀರೇಂದ್ರ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕೆ. ಸಿದ್ದಲಿಂಗಪ್ಪ ಅತಿಥಿಗಳನ್ನು ಸನ್ಮಾನಿಸಿದರು. ವಿದ್ಯಾ ಹಾಗೂ ಕಲ್ಯಾಣ್ ನಿರೂಪಿಸಿದರು. ಎಂ.ಎಸ್. ಪೂಜಾ ವಂದಿಸಿದರು.