ಪಿಎಂ ಜನೌಷಧ ಕೇಂದ್ರ ಮುಚ್ಚುವ ನಿರ್ಧಾರಕ್ಕೆ ಖಂಡನೆ

31 HANUR 1
ಜನೌಷಧ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದನ್ನು ಖಂಡಿಸಿ ಕಾಮಗೆರೆಯಲ್ಲಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾತನಾಡಿದರು. ಕೆ.ಪಿ.ವೃಷಭೇಂದ್ರಸ್ವಾಮಿ, ಮಧು, ಮಹೇಶ್ ಇತರರು ಇದ್ದರು.
Published on

ಹನೂರು: ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ಮುಚ್ಚುವುದಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಖಂಡನೀಯ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಹೇಳಿದರು.

ಸಮೀಪದ ಕಾಮಗೆರೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಕ್ರವಾರ ಜನೌಷಧ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಜನೌಷಧ ಕೇಂದ್ರ ಕಡು ಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧ ಪೂರೈಸುವ ಸಲುವಾಗಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ತೆರೆಯಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಔಷಧಗಳ ದರವೂ ಏರಿಕೆಯಾಗಿದೆ. ಇದರಿಂದ ಕಡು ಬಡವರು ಗುಣಮಟ್ಟದ ಔಷಧವನ್ನು ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.

ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಖಾಸಗಿ ಕಂಪನಿಗಳ ಔಷಧಗಳನ್ನು ಮಾರಾಟ ಮಾಡುವ ದುರುದ್ದೇಶದಿಂದ ಜನೌಷಧ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರ ಈ ಬಗ್ಗೆ ಮನಗಂಡು ಆದೇಶಿಸಿರುವ ನಿರ್ಧಾರವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಉಗ್ರ ಪತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಹನೂರು ಮಂಡಲಾಧ್ಯಕ್ಷ ಕೆ.ಪಿ.ವೃಷಭೇಂದ್ರಸ್ವಾಮಿ ಮಾತನಾಡಿ, ಬಡ ಜನರು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಜನೌಷಧ ಕೇಂದ್ರಗಳು ಆಶಾಕಿರಣ. ಸರ್ಕಾರಿ ಆಸ್ಪತ್ರೆಯ ಆವರಣದಲ್ಲೇ ಗುಣಮಟ್ಟದ ಔಷಧಗಳು ಸಿಗುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಂದ್ರಗಳನ್ನು ತೆರೆದಿದ್ದಾರೆ. ಆದರೆ ರಾಜ್ಯ ಸರ್ಕಾರ ಮುಚ್ಚಲು ಹೊರಟಿರುವುದು ಬಡ ಜನರಿಗೆ ಅನ್ಯಾಯವೆಸಗಿದಂತಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ನಿರ್ಧಾರದಿಂದ ದೂರ ಸರಿಯಬೇಕು ಎಂದರು.

ಗ್ರಾಪಂ ಅಧ್ಯಕ್ಷ ಚಿಕ್ಕಸ್ವಾಮಿ, ತಾಲೂಕು ಮಾಧ್ಯಮ ಸಂಚಾಲಕ ಮಧು, ಒಬಿಸಿ ಪ್ರಧಾನ ಕಾರ್ಯದರ್ಶಿ ಮಹೇಶ್, ಮುಖಂಡರಾದ ಸುಂದ್ರಪ್ಪ, ಮಂಜುನಾಥ್, ಮಹದೇವಪ್ಪ, ಗುರುಸ್ವಾಮಿ, ಪ್ರಕಾಶ್, ನಾಗರಾಜು, ಮಹದೇವಸ್ವಾಮಿ, ರಾಜಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net