ಮತ್ಸ್ಯ ಸಂಪದ ಯೋಜನೆಗೆ 20,050 ಕೋಟಿ ವೆಚ್ಚ: ಕೇಂದ್ರ ಸಚಿವ ಪರಷೋತ್ತಮ ರೂಪಾಲ

udp-19-rupala
Published on

ಉಡುಪಿ: ದೇಶದಲ್ಲಿ ಮೀನುಗಾರಿಕಾ ವಲಯವನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಲಾಗಿದ್ದು, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ 20,050 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವ ಪರಷೋತ್ತಮ ರೂಪಾಲ ಹೇಳಿದರು.

ಭಾನುವಾರ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದ ಸಾಗರ ಪರಿಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಗರ ಪರಿಕ್ರಮ ಯೋಜನೆಯ ಮೂಲಕ ದೇಶದ 8,000 ಕಿ.ಮೀ. ಕರಾವಳಿ ವ್ಯಾಪ್ತಿಯಲ್ಲಿ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ, ಆಯಾ ಭಾಗದ ಮೀನುಗಾರರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹರ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಕೃಷಿಕರಿಗೆ ಮಾತ್ರ ಮೀಸಲಾಗಿದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಮೀನುಗಾರರಿಗೂ ವಿಸ್ತರಿಸಲಾಗಿದ್ದು, ವರ್ಷಕ್ಕೆ 50,000 ರೂ.ವರೆಗೆ ಶೇ. 4ರಬಡ್ಡಿದರಲ್ಲಿ ಸಾಲಸೌಲಭ್ಯ ಲಭಿಸಲಿದೆ. ಪ್ರಗತಿಪರಿಶೀಲನಾ ಸಭೆಯಲ್ಲಿ ಕಾರ್ಡ್ ಬಗ್ಗೆ ಜಿಲ್ಲಾವಾರು ವರದಿ ಪಡೆಯುತ್ತಿದ್ದು, ಬ್ಯಾಂಕ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಡ್ ವಿತರಿಸಲು ಕ್ರಮಕೈಗೊಳ್ಳಬೇಕು ಎಂದರು.

75 ಪಶು ಆ್ಯಂಬುಲೆನ್ಸ್
ದೇಶದಲ್ಲಿ ಮೊದಲ ಬಾರಿಗೆ ಪಶುಗಳಿಗೂ ಆ್ಯಂಬುಲೆನ್ಸ್ ವ್ಯವಸ್ಥೆ ಜಾರಿಯಾಗಿದ್ದು, ಅನೇಕ ರಾಜ್ಯಗಳು ಈ ಬಗ್ಗೆ ಉದಾಸೀತನತೆ ತಾಳಿವೆ. ಆದರೆ ಕರ್ನಾಟಕ ಸರ್ಕಾರ ಆಸಕ್ತಿ ವಹಿಸಿ, ಬೇಡಿಕೆ ಸಲ್ಲಿಸಿದ ಕಾರಣ 75 ಆ್ಯಂಬುಲೆನ್ಸ್‌ಗಳನ್ನು ನೀಡಲಾಗಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಫಿಶಿಂಗ್ ಆ್ಯಂಬುಲೆನ್ಸ್‌ಗಳ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಸರ್ಕಾರದ ಮೀನುಗಾರಿಕಾ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಬಾಲಾಜಿ, ಸಾಗರ ಪರಿಕ್ರಮ ಯೋಜನೆಯ ಅಂಗವಾಗಿ ಈಗಾಗಲೇ ಗುಜರಾತ್, ಮಹಾರಾಷ್ಟ್ರ, ಡಯು ಮತ್ತು ಡಾಮನ್ ಗೆ ಭೇಟಿ ನೀಡಲಾಗಿದೆ. 4ನೇ ಹಂತವಾಗಿ ಕರ್ನಾಟಕಕ್ಕೆ ಆಗಮಿಸಲಾಗಿದೆ. ಮೀನುಗಾರಿಕಾ ಉತ್ಪಾದನೆಯಲ್ಲಿ ಕರ್ನಾಟಕವು ಕಳೆದ ಸಾಲಿನಲ್ಲಿ ರಾಷ್ಟ್ರದಲ್ಲೇ ಪ್ರಥಮ ಸ್ಥಾನ ಪಡೆದಿದೆ ಎಂದರು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆ ವತಿಯಿಂದ ವಿವಿಧ ಯೋಜನೆಗಳ 107 ಮಂದಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ನಿಯಮಿತದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ರಾಜ್ಯ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹಿಮ್, ಕೋಸ್ಟ್ ಗಾರ್ಡ್ ಡಿ.ಐ.ಜಿ. ಪಿ.ಕೆ.ಮಿಶ್ರಾ , ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ,ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ. ಸುವರ್ಣ, ಮೀನುಗಾರಿಕೆ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಮೀನುಗಾರಿಕೆ ಇಲಾಖೆ ನಿರ್ದೇಶಕ ರಾಮಾಚಾರ್ಯ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net