

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾ. 12ರಂದು ರೈಲ್ವೆಗೆ ಸಂಬಂಧಿಸಿದ 85ಸಾವಿರ ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಲೋಕಾರ್ಪಣೆಯನ್ನು ನೆರವೇರಿಸುವರು. ಇದರಲ್ಲಿ ನೈಋತ್ಯ ರೈಲ್ವೆ ವಲಯದ 5241 ಕೋಟಿ ರೂ. ವೆಚ್ಚದ ಯೋಜನೆಗಳಿಗೂ ಚಾಲನೆ ಸಿಗಲಿದೆ ಎಂದು ವಲಯದ ಮಹಾಪ್ರಬಂಧಕ ಅರವಿಂದ ಶ್ರಿವಾಸ್ತವ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 297 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿಯಲ್ಲಿ ಡೆಮೋ-ಮೆಮೋ ಶೆಡ್ ಹಾಗೂ ಬೆಂಗಳೂರು ತಣ್ಣಿಸಂದ್ರ ಬಳಿ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ನಿರ್ವಹಣೆ ಕಾರ್ಯಾಗಾರ ನಿರ್ವಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. 4806 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡ ತಳಕಲ್-ಲಿಂಗನಬಂಡಿ ಹೊಸ ಮಾರ್ಗ ಹಾಗೂ ಗದಗ-ಬಾಗಲಕೋಟ, ಕುಡಚಿ-ಮೀರಜ ದ್ವಿಪಥ ಮಾರ್ಗವನ್ನು ಲೋಕಾರ್ಪಣೆಗೊಳಿಸುವರು ಎಂದರು.
ಗಂಗಾವತಿ, ಪೆನುಕೊಂಡದಲ್ಲಿ 22.93 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಗೂಡ್ಸ್ಶೆಡ್, 112.75 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ಒಡ್ಡರಹಳ್ಳಿಯ ಗತಿ ಶಕ್ತಿ ಮಲ್ಟಿ ಮಾಡಲ್ ಕಾಗೋ ಟರ್ವಿುನಲ್ ಹಾಗೂ ಕಡಕೋಳದ ಗತಿ ಶಕ್ತಿ ಕಾಗೋ ಟರ್ವಿುನಲ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸುವರು. ಬೆಂಗಳೂರು (ಎಸ್ಎಂವಿಟಿ), ಹುಬ್ಬಳ್ಳಿ, ಬಂಗಾರಪೇಟೆ ಹಾಗೂ ಮೈಸೂರು ರೈಲು ನಿಲ್ದಾಣಗಳಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ಉದ್ಘಾಟಿಸುವರು. ಒಂದು ನಿಲ್ದಾಣ-ಒಂದು ಉತ್ಪನ್ನ ಕಲ್ಪನೆಯಡಿ 67 ನಿಲ್ದಾಣಗಳಲ್ಲಿ ಮಳಿಗೆಗಳಿಗೆ ಚಾಲನೆ ನೀಡುವರು ಎಂದು ತಿಳಿಸಿದರು.