

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ನಗರದ ಗೋಲ್ಡ್ ಪಿಂಚ್ ಮೈದಾನದಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ ಸೆ. 2ರಂದು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಲು ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ಪೂರ್ವಭಾವಿ ಸಿದ್ದತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಗುರುವಾರ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಣಂಬೂರಿನಲ್ಲಿರುವ ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಅಂದಾಜು 3,600 ರಿಂದ 4,500 ಕೋಟಿ ರೂ.ಗಳ ವರೆಗಿನ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ನಗರದ ಗೋಲ್ಡ್ ಪಿಂಚ್ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಸುವ ಚಿಂತನೆ ಇದೆ. ಅದಕ್ಕಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳ ಪಟ್ಟಿ ತಯಾರಿಸಿ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದರು.
ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆದು, ಅಭೂತಪೂರ್ವವಾಗಿ ಯಶಸ್ಸಾಗಬೇಕು. ವಿವಿಧ ಯೋಜನೆಗಳ ಫಲಾನುಭವಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಫಲಾನುಭವಿಗಳನ್ನು ಕರೆ ತರುವ ಹಾಗೂ ವಾಪಸ್ಸು ಕಳುಹಿಸಿಕೊಡಲು ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಡಬೇಕು, ಅಂದು ಸಂಜೆ ನಾಲ್ಕು ಗಂಟೆಗೆ ಪ್ರಧಾನಿ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುವುದರಿಂದ ಅವರು ಬರುವುದಕ್ಕೂ ಮುನ್ನವೇ ಸಾರ್ವಜನಿಕರು ಹಾಗೂ ಫಲಾನುಭವಿಗಳು ಆಗಮಿಸಬೇಕು. ಪ್ರಧಾನಮಂತ್ರಿಗಳ ಕಾರ್ಯಕ್ರಮವಾದ್ದರಿಂದ ಹೆಚ್ಚಿನ ಭದ್ರತೆ ಮತ್ತು ತಪಾಸಣೆ ಇರಲಿದೆ. ನಿಗದಿತ ಸಮಯಕ್ಕೂ ಮುನ್ನ ಸಾರ್ವಜನಿಕರು ಆಗಮಿಸಬೇಕು. ಅವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಇರಲಿದೆ ಎಂಬ ಮಾಹಿತಿ ನೀಡಿದರು.
ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ವಹಿಸಿದ ಜವಾಬ್ದಾರಿಯನ್ನು ಅವರೇ ನಿರ್ವಹಿಸಬೇಕು, ಹೊರತು ಅದನ್ನು ಇನ್ನೊಬ್ಬರಿಗೆ ಹಸ್ತಾಂತರಿಸಬಾರದು. ಈ ಕಾರ್ಯಕ್ರಮಕ್ಕೆ ಆಗಮಿಸುವ ಪ್ರಧಾನಮಂತ್ರಿಗಳು ಜಿಲ್ಲೆಗೆ ಮತ್ತಷ್ಟು ಅಭಿವೃದ್ಧಿ ಪ್ಯಾಕೇಜ್ ಘೋಷಿಸುವ ಸಾಧ್ಯತೆಯೂ ಇರಬಹುದು ಎಂದು ಹೇಳಿದರು.