

ಮಂಡ್ಯ: ಹದಿನೇಂಟು ವಿಧದ ಸಾಂಪ್ರದಾಯಿಕ ಕುಶಲಕರ್ಮಿಗಳು ಸ್ವಯಂ ಉದ್ಯೋಗ ಪ್ರಾರಂಭಿಸಲು ಪಿಎಂ ವಿಶ್ವಕರ್ಮ ಯೋಜನೆ ಅನುಕೂಲವಾಗಲಿದೆ. ಈ ಸಂಬಂಧ ಅರ್ಹ ಫಲಾನುಭವಿಗಳನ್ನು ಗುರುತಿಸಿ ನೋಂದಣಿಯನ್ನು ಚುರುಕುಗೊಳಿಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗದರ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಅನುಷ್ಠಾನ ಕುರಿತಂತೆ ಬುಧವಾರ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮರ ಹಾಗೂ ಗಾರೆ ಕೆಲಸಗಾರರು, ವಿಗ್ರಹ ತಯಾರಕರು/ಕಲ್ಲು ಹೊಡೆಯುವವರು, ಟೈಲರ್, ಅಕ್ಕಸಾಲಿಗರು, ಕ್ಷೌರಿಕರು, ಅಗಸರು(ದೋಬಿ), ಬುಟ್ಟಿ/ಚಾಪೆ/ಕಸ ಪೊರಕೆ ತಯಾರಕರು, ನೇಕಾರರು, ಕಮ್ಮಾರರು, ಕುಂಬಾರರು, ಹೂವಿನ ಹಾರ ತಯಾರಕರು, ಮೀನು ಬಲೆ ತಯಾರಕರು, ದೋಣಿ ತಯಾರಕರು, ಚರ್ಮಕಾರರು, ಆಯುಧ ತಯಾರಕರು, ಕಬ್ಬಿಣದ ಉಪಕರಣಗಾರರು, ಆಟಿಕೆ ತಯಾರಕರು, ಬೀಗ ತಯಾರಕರನ್ನು ಒಳಗೊಂಡಂತೆ ವಿವಿಧ ರೀತಿಯ ಒಟ್ಟು 18 ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
ನೋಂದಣಿಯಾದ ನಂತರ ಡಿಜಿಟಲ್ ಐಡಿ, ಪಿಎಂ ವಿಶ್ವಕರ್ಮ ಪ್ರಮಾಣ ಪತ್ರ ಮತ್ತು ಐಡಿ ಕಾರ್ಡ್ ನೀಡಲಾಗುವುದು. ಮಾತ್ರವಲ್ಲದೆ 500 ರೂ ಸಂಭಾವನೆಯೊಂದಿಗೆ 5 ದಿನದ ಕೌಶಲ ತರಬೇತಿ ನೀಡಿ 15 ಸಾವಿರ ರೂವರೆಗಿನ ಟೂಲ್ ಕಿಟ್ ವಿತರಣೆ ಮಾಡಲಾಗುವುದು. ತರಬೇತಿ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‌ನಿಂದ ಶೇ.5ರ ಬಡ್ಡಿ ದರದಲ್ಲಿ 2 ಹಂತದಲ್ಲಿ ಸಾಲವನ್ನು ನೀಡಲಾಗುವುದು. ಮೊದಲ ಹಂತದಲ್ಲಿ ಗರಿಷ್ಟ 1 ಲಕ್ಷ ರೂಗಳನ್ನು 18 ತಿಂಗಳ ಮರುಪಾವತಿ ಹಾಗೂ ಎರಡನೇ ಹಂತದಲ್ಲಿ ಗರಿಷ್ಟ 2 ಲಕ್ಷ ರೂಗಳನ್ನು 30 ತಿಂಗಳ ಮರುಪಾವತಿ ಷರತ್ತಿನೊಂದಿಗೆ ನೀಡಲಾಗುವುದು ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಇದುವರೆಗೂ ಯೋಜನೆಗೆ 44 ಸಾವಿರ ಜನರು ನೋಂದಣಿಯಾಗಿದ್ದು, ಇನ್ನೂ ಹೆಚ್ಚಿನ ಕುಶಲರ್ಮಿಗಳ ನೋಂದಣಿಯಾಗಬೇಕು. ಇದಕ್ಕಾಗಿ ವಿವಿಧ ಕುಶಲಕರ್ಮಿ ಸಂಘಟನೆಗಳ ಸಹಯೋಗದೊಂದಿಗೆ ಕಾರ್ಯಾಗಾರ ನಡೆಸಿ. ಈ-ಶ್ರಮ ಫೋರ್ಟಲ್ ನಲ್ಲಿ ಅಸಂಘಟಿತ ಕಾರ್ಮಿಕರ ಮಾಹಿತಿ ಲಭ್ಯವಿದ್ದು, ಕಾರ್ಮಿಕ ಇಲಾಖೆ ಸಹಕಾರದೊಂದಿಗೆ ಯೋಜನೆಯಡಿ ಬರುವ ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಗುರುತಿಸಿ ನೋಂದಣಿ ಮಾಡಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಉಪಕಾರ್ಯದರ್ಶಿ ಆನಂದ್‌ಕುಮಾರ್, ಉಪವಿಭಾಗಾಧಿಕಾರಿಗಳಾದ ಶಿವಮೂರ್ತಿ, ನಂದೀಶ್ ಇತರರಿದ್ದರು.
ನೋಂದಣಿಗೆ ಬೇಕಿರುವ ದಾಖಲೆ
ಯೋಜನೆಗೆ 18 ವರ್ಷ ತುಂಬಿರುವ ಹಾಗೂ ನಿಗದಿಪಡಿಸಿರುವ ವೃತ್ತಿಗಳಲ್ಲಿ ಕೆಲಸ ಮಾಡುತ್ತಿರುವವರು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಧಾರ್‌ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ಜೋಡಿತ ಮೊಬೈಲ್ ಸಂಖ್ಯೆ, ರೇಷನ್ ಕಾರ್ಡ್ ಹಾಗೂ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಅರ್ಜಿ ಸಲ್ಲಿಸಲು ನೀಡಬೇಕು. ಮಾಹಿತಿಗೆ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರ ಕಚೇರಿ ದೂ.ಸಂ 08232-200964, 08232-221358 ಅಥವಾ ಪಿಎಂ ವಿಶ್ವಕರ್ಮ ಯೋಜನೆ ಸಾಮಾನ್ಯ ಸೇವಾ ಕೇಂದ್ರ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು.