

ಉಡುಪಿ: ಪಿಎಂ ವಿಶ್ವಕರ್ಮ ಯೋಜನೆಯಲ್ಲಿ 18 ವೃತ್ತಿಗಳನ್ನು ಆಯ್ಕೆಮಾಡಿಕೊಂಡಿದ್ದು, ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಅಕ್ಕಸಾಲಿಗರಿಗೆ ಚಿನ್ನಾಭರಣ ತಯಾರಿಕೆ ಕೌಶಲ್ಯಗಳನ್ನು ಕಲಿಸುವ ಗುರಿ ಹೊಂದಲಾಗಿದೆ. ಈಗಾಗಲೇ 304 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.
ಶುಕ್ರವಾರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ಸ್ ಆ್ಯಂಡ್ ಜುವೆಲ್ಲರಿ ಸಂಸ್ಥೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಫಲಾನುಭವಿಗಳ ಮೊದಲ ಹಂತದ ತರಬೇತಿಯನ್ನು ಉದ್ಘಾಟಿಸಿ, ಮಾತನಾಡಿದರು.
ಜಿಲ್ಲೆಯಲ್ಲಿ ಆಭರಣ ತಯಾರಕೆ ಮತ್ತು ಮಾರಾಟ ವೃತ್ತಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಯೋಜನೆ ಪ್ರಯೋಜನ ಪಡೆಯಬೇಕು. ಸಣ್ಣ ಉದ್ದಿಮೆಗಳನ್ನು ನಡೆಸುವವರಿಗೆ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಈ ಮೂಲಕ ಹೆಚ್ಚಿನ ಉದ್ಯೋಗ ಸೃಜಿಸುವುದು ಯೋಜನೆ ಉದ್ದೇಶ ಎಂದರು.
ವಿದ್ಯಾರ್ಥಿಗಳಿಗೆ ತರಬೇತಿ
ಹೆಣ್ಮಕ್ಕಳಲ್ಲಿ ವೃತ್ತಿ ನೈಪುಣ್ಯತೆ ಬೆಳೆಸುವ ನಿಟ್ಟಿನಲ್ಲಿ ಸಂಸ್ಥೆಯ ಮೂಲಕ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ವಾಸ್ತವ್ಯದಲ್ಲಿರುವ 40 ವಿದ್ಯಾರ್ಥಿನಿಯರಿಗೆ ಕಾಲೇಜು ಮುಗಿದ ಬಳಿಕ 4 ರಿಂದ 6 ಗಂಟೆವರೆಗೆ 1 ತಿಂಗಳ ತರಬೇತಿ ನೀಡಲಾಗಿದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಆಯ್ಕೆಯಾದ 30 ಮಂದಿಗೆ ಮೊದಲ ಹಂತದ ಆಭರಣ ತಯಾರಿಕೆಯ ಬಗ್ಗೆ ಪ್ರತಿ ದಿನ 500 ಶಿಷ್ಯವೇತನದೊಂದಿಗೆ 6 ದಿನದ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಬಳಿಕ 15 ಸಾವಿರ ರೂ. ಮೌಲ್ಯದ ಟೂಲ್ ಕಿಟ್ ಹಾಗೂ ಪ್ರಮಾಣಪತ್ರ ವಿತರಿಸಲಾಗುವುದು. ಅಗತ್ಯವಿದ್ದವರಿಗೆ ಬ್ಯಾಂಕ್ ಮೂಲಕ 1 ಲಕ್ಷ ರೂ. ಸಾಲ ಸೌಲಭ್ಯವೂ ಲಭಿಸಲಿದೆ ಎಂದರು.
ಜಿಜೆಇಪಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ಧಾರ್ಥ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದಿಪ್ ಡಿಸೋಜಾ, ಬ್ರಾಂಚ್ ಹೆಡ್ ಕೌಶಿಕ್ ಎಸ್.ವಿ. ಮೊದಲಾದವರು ಉಪಸ್ಥಿತರಿದ್ದರು. ಸಿದ್ಧಿ ಎಸ್. ರಾವ್ ಕಾರ್ಯಕ್ರಮ ನಿರೂಪಿಸಿ, ಮಿಶಲ್ ವಂದಿಸಿದರು.