

ವಿಜಯವಾಣಿ ಸುದ್ದಿಜಾಲ ಉಡುಪಿ
ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ 18,809 ಅರ್ಜಿ ಸಲ್ಲಿಕೆಯಾಗಿದ್ದು 5,676 ಅರ್ಜಿ ಕೌಶಲಾಭಿವೃದ್ಧಿ ಇಲಾಖೆಗೆ ರವಾನಿಸಲಾಗಿದೆ. 4,865 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದ್ದು, ಫಲಾನುಭವಿಗಳ ಖಾತೆಗೆ 26 ಕೋಟಿ ರೂ. ಜಮಾ ಮಾಡಲಾಗಿದೆ. 150 ಟೂಲ್ ಕಿಟ್ಗಳನ್ನು ಅಂಚೆ ಇಲಾಖೆ ಮೂಲಕ ವಿತರಿಸಲಾಗಿದೆ. ಪ್ರತಿ ಅಂಚೆ ಕಚೇರಿಯಲ್ಲೂ ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಟೂಲ್ಕಿಟ್ ವಿತರಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದರು.
ಉಡುಪಿಯ ಜಿಪಂ ಕಟ್ಟಡದ ಡಾ. ವಿ.ಎಸ್. ಆಚಾರ್ಯ ಸ್ಮಾರಕ ಸಭಾಂಗಣದಲ್ಲಿ ಮಾ.14ರಂದು ಆಯೋಜಿಸಿದ್ದ ಪಿಎಂ ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಟೈಲರ್, ಕಾರ್ಪೆಂಟರಿ, ಗಾರೆ ವೃತ್ತಿಗೆ ಹೆಚ್ಚಿನ ಅರ್ಜಿಗಳು ಬಂದಿದೆ. ಒಟ್ಟು ಅರ್ಜಿಯಲ್ಲಿ 2,030 ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. 969 ಮಂದಿಗೆ ಎಂಟು ತರಬೇತಿ ಸಂಸ್ಥೆಗಳಲ್ಲಿ ಆದ್ಯತೆಯೊಂದಿಗೆ ತರಬೇತಿ ನೀಡಲಾಗುವುದು. ಪಿಎಂಇಜಿಪಿ 438 ಮಂದಿ ಅರ್ಜಿ ಸಲ್ಲಿಸಿದ್ದು 97 ಫಲಾನುಭವಿಗಳಿಗೆ 2.95 ಕೋಟಿ ರೂ. ಸಹಾಯಧನ ನೀಡಲಾಗಿದ್ದು, ರಾಜ್ಯಕ್ಕೆ ಉಡುಪಿ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. 374 ಮಂದಿಗೆ ಅಂಚೆ ಇಲಾಖೆ ಮೂಲಕ ವಾಸ್ತವಿಕ ಪರಿಶೀಲನಾ ವರದಿ ಬಳಿಕ ಸಬ್ಸಿಡಿ ಪಾವತಿಯಾಗಲಿದೆ. ಸ್ವಯಂ ಉದ್ಯೋಗ ಸೃಷ್ಟಿಗಾಗಿ ಇನ್ನಷ್ಟು ಜನರನ್ನು ಯೋಜನಾ ವ್ಯಾಪ್ತಿಗೆ ತರಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್, ಸಹಾಯಕ ನಿರ್ದೇಶಕ ಡಾ. ಸೀತಾರಾಮ ಶೆಟ್ಟಿ, ಜಿಲ್ಲಾ ಮಾರ್ಗದರ್ಶಿ ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕ ಹರೀಶ್ ಜಿ., ಕೌಶಲ್ಯಾಭಿವೃದ್ಧಿ ಇಲಾಖೆಯ ಅರುಣ್ ಉಪಸ್ಥಿತರಿದ್ದರು.