

ಕಾರವಾರ: ಜಿಲ್ಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಗಳು 350 ಕ್ಕೂ ಹೆಚ್ಚು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೊಂದಣಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಏಕ ಗವಾಕ್ಷಿ ಸಭೆಯಲ್ಲಿ ಪಿಎಂ ವಿಶ್ವ ಕರ್ಮ ಯೋಜನೆಯ ಪೋಸ್ಟರ್ ನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪಿಎಂ ವಿಶ್ವ ಕರ್ಮ ಯೋಜನೆಯಲ್ಲಿ ಮರ ಕೆಲಸಗಾರರು, ಗಾರೆ ಕೆಲಸಗಾರರು, ವಿಗ್ರಹ ತಯಾರಕರು, ಕಲ್ಲು ಒಡೆಯುವವರು, ಟೈಲರ್‌ಗಳು, ಅಕ್ಕಸಾಲಿಗರು, ಕ್ಷೌರಿಕರು, ಅಗಸರು, ಬುಟ್ಟಿ, ಚಾಪೆ,ಕಸ ಪೊರಕೆ, ತಯಾರಕರು,ಕಮ್ಮಾರರು, ಕಂಬಾರರು, ಹೂವಿನ ಹಾರ ತಯಾರಕರು, ಮೀನು ಬಲೆ ತಯಾರಕರು, ದೋಣಿ ತಯಾರಕರು, ಚರ್ಮಕಾರರು, ಆಯುಧ ತಯಾರಕರು, ಕಬ್ಬಿಣ ಉಪಕರಣ ತಯಾರಿಕಾಗಾರರು, ಆಟಿಕೆ ತಯಾರಕರು ಸೇರಿದಂತೆ ಒಟ್ಟು 18 ವಿವಿಧ ವೃತ್ತಿಯ ಕುಶಲಕರ್ಮಿಗಳು ಈ ಯೋಜನೆಯಲ್ಲಿ ಆಧಾರ ರಹಿತ 3 ಲಕ್ಷದ ವರೆಗೆ ಸಾಲವನ್ನು ಪಡೆಯಬಹುದು ಎಂದರು.
ಸಮುದಾಯಗಳಲ್ಲಿ ಕುಶಲಕರ್ಮಿಗಳನ್ನು ಗುರುತಿಸಿ ಅವರ ವೃತ್ತಿ ಕೌಶಲ್ಯಕ್ಕೆ ಸೂಕ್ತ ತರಬೇತಿ ನೀಡಿ ಆರ್ಥಿಕ ಸೌಲಭ್ಯ, ಡಿಜಿಟಿಲ್ ಸೌಲಭ್ಯ, ಕುಶಲಕರ್ಮಿಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಯಾವುದೇ ಅರ್ಹ ಫಲಾನುಭವಿ ಈ ಯೋಜನೆಯಿಂದ ವಂಚಿತರಾಗದಂತೆ ಈ ಬಗ್ಗೆ ಹೆಚ್ಚಿನ ಪ್ರಚಾರ ಮತ್ತು ಸಮುದಾಯಗಳಲ್ಲಿ ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಮಾಹಿತಿಯುಳ್ಳ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಜಯಂತ್ ಹೆಚ್.ವಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಹಾಗೂ ಜಿಲ್ಲಾ ಮಟ್ಟದ ಅಽಕಾರಿಗಳು ಉಪಸ್ಥಿತರಿದ್ದರು