

ಕೊಪ್ಪಳ:ಪಿಎಂ ಸ್ವ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸದ್ಯ ಪತ್ರಿಕಾ ವಿತರಕರಿಗೂ ವಿಸ್ತರಿಸಲಾಗಿದೆ ಎಂದು ಯೋಜನೆ ರಾಜ್ಯ ಸಂಚಾಲಕ ಎಸ್.ಎ.ರಾಮದಾಸ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಕೌಶಲಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಪಿಎಂ ಸ್ವ ನಿಧಿ ಯೋಜನೆ ಜಾಗೃತಿ ಮತ್ತು ಫಲಾನುಭವಿಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರ್ಹರು ಸೌಲಭ್ಯಕ್ಕಾಗಿ ಅಲೆಯಬೇಕಿಲ್ಲ. ಹಾಲು, ಪತ್ರಿಕೆ ಹಾಕುವವರು, ಆಹಾರ ಪದಾರ್ಥ ಮನೆ ಮನೆಗೆ ತಲುಪಿಸುವರಿಗೂ ಸಾಲ ಸಿಗಲಿದೆ. ಸದ್ಯ ನಗರ ವಾಸಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಬ್ಯಾಂಕುಗಳು ಪ್ರತಿ ಬುಧವಾರ ಮೇಳ ಆಯೋಜಿಸಲಿವೆ.
ಡಿಜಿಟಲ್ ವಹಿವಾಟಿಗೆ ಆದ್ಯತೆ ನೀಡಿದ್ದು, ಎಲ್ಲರೂ ಸಹಕರಿಸಿ. ವ್ಯಾಪಾರವನ್ನು ಸಾಧ್ಯವಾದಷ್ಟು ನಗದು ರಹಿತವಾಗಿ ನಡೆಸಿ ಎಂದು ಮನವಿ ಮಾಡಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಜನರು ದುಡಿವ ಮೂಲಕ ಆರ್ಥಿಕ ಅಭಿವೃದ್ಧಿ ಆಗಬೇಕೆಂಬುದು ಪಿಎಂ ನರೇಂದ್ರ ಮೋದಿ ಕನಸು. ಅದಕ್ಕೆ ಪೂರಕವಾಗಿ ಯೋಜನೆ ರೂಪಿಸುತ್ತಿದ್ದಾರೆ. ನಿಮ್ಮ ನಿಮ್ಮ ಕಾಯಕ ನಡೆಸಲು ನೆರವು ನೀಡಿದ್ದಾರೆ.
ಜಿಲ್ಲೆಯಲ್ಲಿ ಪಿಎಂ ಸ್ವ ನಿಧೀ ಯೋಜನೆ ಸಂಪೂರ್ಣವಾಗಿ ಅನುಷ್ಠಾನವಾಗುತ್ತಿದೆ. ರಾಜ್ಯ ಸರ್ಕಾರ ತಾನು ಹಣ ನೀಡಿ ಪಡೆವ ವಿದ್ಯುತ್, ಬಸ್ ಪ್ರಯಾಣ ಇನ್ನಿತರ ಯೋಜನೆ ಉಚಿತವಾಗಿ ನೀಡುತ್ತಿದೆ. ರೈತರನ್ನು ಕಡೆಗಣಿಸಿದೆ. ಇದರಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ದೂರಿದರು.
ಶಾಸಕ ದೊಡ್ಡನಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾ ಕೌಶಲ ಮಿಷನ್ ಡೇ ನಲ್ಮ್ ಅಭಿಯಾನ ವ್ಯವಸ್ಥಾಪಕ ಪ್ರವೀಣ್, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್,
ಜಿಲ್ಲಾ ಕೌಶಲ ಮಿಷನ್ ಸಹಾಯಕ ನಿರ್ದೇಶಕ ಮಂಜುನಾಥ ಬೆಲ್ಲದ್, ಲೀಡ್ ಬ್ಯಾಂಕ್ ಮ್ಯಾನೇಜರ್ ವೀರೇಂದ್ರ, ನಗರಸಭೆ ಸದಸ್ಯೆ ವಿದ್ಯಾ ಹೆಸರೂರು ಇತರರಿದ್ದರು.