ನಿರಾಶ್ರಿತರಿಗೆ ಆಶ್ರಯ ನೀಡಲು ವ್ಯವಸ್ಥೆ: ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ

1 (5)
Published on

ಮಂಡ್ಯ: ನಿರಾಶ್ರಿತರಿಗೆ ಸಹಾಯ ಮಾಡುವ ಉದ್ದೇಶದಿಂದ ಆಶ್ರಯ ತಾಣ ನಿರ್ಮಾಣ ಮಾಡಲಾಗಿದೆ. ಇಲ್ಲಿ ಹೆಚ್ಚು ಜನರಿಗೆ ಆಶ್ರಯ ನೀಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪಿ.ಎಂ ಸ್ವನಿಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾತ್ರಿ ವೇಳೆ ಬೀದಿ ಬದಿಯಲ್ಲಿ ಮಲಗುವ ವಸತಿ ರಹಿತರಿಗೆ ಡೇ- ನಲ್ಮ್ ಯೋಜನೆಯಡಿ ಆಶ್ರಯ ತಾಣವನ್ನು ನಗರದಲ್ಲಿ ನಿರ್ಮಿಸಲಾಗಿದೆ. ಆ ತಾಣದಲ್ಲಿ 30 ಜನರು ಆಶ್ರಯ ಪಡೆಯುವ ಸೌಲಭ್ಯವಿದೆ. ಜತೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿ ಕೊಡಲಾಗಿದೆ. ಪ್ರಮುಖವಾಗಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ವಸತಿ ತಾಣದ ವ್ಯವಸ್ಥೆ ಇದೆ. ನಿರಾಶ್ರಿತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಜನ್‌ಧನ್ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ, ಜನನಿ ಸುರಕ್ಷಾ ಯೋಜನೆ, ಮಾತೃ ವಂದನಾ ಯೋಜನೆ, ಒಂದು ದೇಶ- ಒಂದು ಕಾರ್ಡ್, ಶ್ರಮ ಯೋಗಿ ಮನಧನ್ ಯೋಜನೆ, ಕಟ್ಟಡ ಮತ್ತು ಇತರೆ ಕಾರ್ಮಿಕರ ನೋಂದಣಿ ಕಾರ್ಯಕ್ರಮ ಬಗ್ಗೆ ಗಮನಹರಿಸಬೇಕು. ಇನ್ನು ನಗರಸಭೆಗೆ ಸಂಬಂಧಿಸಿದಂತೆ ಅನೇಕ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ಅರ್ಹರಿಗೆ ದೊರಕಬೇಕಾದ ಎಲ್ಲ ಸವಲತ್ತುಗಳನ್ನು ಆದಷ್ಟು ಬೇಗ ಒದಗಿಸಿಕೊಡಲು ಕ್ರಮ ವಹಿಸಬೇಕು. ಪ್ರಮುಖವಾಗಿ ಬೀದಿ ಬೀದಿ ವ್ಯಾಪಾರಿಗಳಿಗೆ ನೆರವಾಗಲು ಅನೇಕ ಬ್ಯಾಂಕ್‌ಗಳ ಸಹಾಯದಿಂದ ಸಾಲ ಸೌಲಭ್ಯಗಳನ್ನು ಕಲ್ಪಿಸಬಹುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಮಂಜುನಾಥ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಸಿದ್ದಲಿಂಗೇಶ್, ಕೇಂದ್ರ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ದೀಪಕ್, ಎನ್‌ಜಿಒ ಕ್ರೆಡಿಟ್ ಐ ಸಂಸ್ಥೆಯ ಮುಖ್ಯಸ್ಥ ಡಾ.ವರ್ಷ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಬ್ಯಾಂಕ್‌ನ ವ್ಯವಸ್ಥಾಪಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net