ಅಮರಗೋಳದಲ್ಲಿ ಪಿಎಂಶ್ರೀ ಸ್ಕೂಲ್​ ಉದ್ಘಾಟನೆ

IMG-20250729-WA0007-1.jpg
Published on

ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಪಿಎಂಶ್ರೀ ಶಾಲೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮ ಮಂಗಳವಾರ ನಡೆಯಿತು.

ಹೊಸ ಶಿಕ್ಷಣ ನೀತಿ (ಎನ್ಇಪಿ 2020) ಅನುಷ್ಠಾನದ ಅಡಿಯಲ್ಲಿ ಪಿಎಂಶ್ರೀ ಯೋಜನೆಗೆ ಆಯ್ಕೆಯಾಗಿರುವ ಅಮರಗೋಳ ಶಾಲೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ವರ್ಚುವಲ್ ಮೂಲಕ ಉದ್ಘಾಟನೆ ನೆರವೇರಿಸಿದರು.

ರಾಜ್ಯದ 35 ಸರ್ಕಾರಿ ಶಾಲೆಗಳು ಯೋಜನೆಗೆ ಆಯ್ಕೆಯಾಗಿವೆ. ಇವುಗಳ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನ ಅಮರಗೋಳ ಸರ್ಕಾರಿ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮೇಯರ್ ಜ್ಯೋತಿ ಪಾಟೀಲ, ಸ್ಥಳಿಯ ಮುಖಂಡರು, ಶಿಕ್ಷಣ ಇಲಾಖೆ ಅಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸಿದರು.

ಮೇಯರ್ ಜ್ಯೋತಿ ಪಾಟೀಲ್ ಅವರು ಶಾಲೆಯ ಫಲಕ ಉದ್ಘಾಟನೆ ಮಾಡಿ ಮಾತನಾಡಿ, ಪ್ರಾಥಮಿಕ ಶಿಕ್ಷಣವು ಜೀವನದ ಭದ್ರ ಬುನಾದಿಯಾಗಿದೆ. ಇದನ್ನು ಮಕ್ಕಳು ಮನಸ್ಸು ಕೊಟ್ಟು ಕಲಿಯುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡಲು ಪಿಎಂಶ್ರೀ ಯೋಜನೆಯಲ್ಲಿ ಬಿಡುಗಡೆಯಾದ ವಿವಿಧ ಕಾರ್ಯಕ್ರಮಗಳು ಅತ್ಯಂತ ಮಹತ್ವಪೂರ್ಣ ಎಂದರು.

ಬಿಇಒ ಉಮೇಶ ಬಮ್ಮಕ್ಕನವರ ಮಾತನಾಡಿ, ಪಿಎಂಶ್ರೀ ಯೋಜನೆ ಅನುಷ್ಠಾನದಲ್ಲಿ ರಾಜ್ಯದ 35 ಶಾಲೆಗಳಲ್ಲಿ ಅಮರಗೋಳ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.

ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ, ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ ದಾಸನೂರ, ಇಲಾಖೆ ಅಧಿಕಾರಿಗಳಾದ ಪದಕಿ, ಜಯಶ್ರೀ ಕಾರೇಕಾರ, ಪ್ರಕಾಶ ಅಂಗಡಿ, ವಿಜಯಲಕ್ಷ್ಮಿ ಹಂಚಿನಾಳ, ಸೂರ್ಯವಂಶಿ, ಮುಖಂಡರಾದ ಸಂತೋಷ ಸೋಗಿ, ಮಂಜುನಾಥ ಸೋಗಿ, ಎಸ್ಡಿಎಂಸಿ ಸದಸ್ಯರು, ಪಾಲಕರು ಪಾಲ್ಗೊಂಡಿದ್ದರು.

ಪ್ರಧಾನ ಗುರು ಬಿ.ವಿ. ಬಮ್ಮನವಾಡಿ ನಿರ್ವಹಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ದಂಡಗಲ್ಲ ಸ್ವಾಗತಿಸಿದರು. ವಾಣಿ ಪತಂಗೆ ನಿರೂಪಿಸಿದರು. ಎಲ್.ಎಲ್. ಕೇಸರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net