ಪಿಎಂಶ್ರೀ ವಿದ್ಯಾಲಯ ಗದಗ ಜಿಲ್ಲೆಯ ಹೆಮ್ಮೆ

3MDG1 RAJATA MAHOTSAVA pm shree
Published on

ಮುಂಡರಗಿ: ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯವು ಗದಗ ಜಿಲ್ಲೆಯ ಹೆಮ್ಮೆ. ಇಲ್ಲಿ ವ್ಯಾಸಂಗ ಮಾಡಿದ ಮತ್ತು ಮಾಡುತ್ತಿರುವ ಎಲ್ಲ ಮಕ್ಕಳು ಭಾಗ್ಯವಂತರು. ಮುಂದಿನ ದಿನಗಳಲ್ಲಿ ವಿದ್ಯಾಲಯದಿಂದ ಇನ್ನೂ ಉತ್ತಮ ಸಾಧಕರು ಹೊರಬರಬೇಕು. ಆ ಮೂಲಕ ಜಿಲ್ಲೆಗೆ, ನಾಡಿಗೆ ಮತ್ತು ದೇಶಕ್ಕೆ ಕೀರ್ತಿ ತರುವಂತಾಗಬೇಕು ಎಂದು ನಾಡೋಜ ಡಾ. ಅನ್ನದಾನೀಶ್ವರ ಶಿವಯೋಗಿಗಳು ಹೇಳಿದರು.

ತಾಲೂಕಿನ ಕೊರ್ಲಹಳ್ಳಿ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಆಯೋಜಿಸಿದ್ದ ರಜತ ಮಹೋತ್ಸವ (ಬೆಳ್ಳಿಹಬ್ಬ) ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ವಿದ್ಯೆ ಸಂಪಾದನೆಯ ಜತೆಗೆ ಉತ್ತಮ ಸಂಸ್ಕೃತಿ ಬೆಳೆಸಿಕೊಂಡು ಇಂದಿನ ತಂತ್ರಜ್ಞಾನದ ಯುಗದಲ್ಲಿ ಬರುವ ಜೀವನದ ಸವಾಲುಗಳುಗಳೆದುರು ನೆಮ್ಮದಿ ಬದುಕು ಸಾಗಿಸುವ ಶಕ್ತಿ ವಿದ್ಯಾಲಯದ ಮಕ್ಕಳು ಪಡೆಯುತ್ತಿದ್ದಾರೆ ಎಂದರು.

ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಮತ್ತು ಬೇರೆ ವಿದ್ಯಾಲಯಗಳಿಗೆ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿರುವ ಸುಮಾರು 150 ಬೋಧಕ- ಬೋಧಕೇತರ ಸಿಬ್ಬಂದಿಗೆ ಗುರುವಂದನೆ ಸಲ್ಲಿಸಲಾಯಿತು. ನವೋದಯ ವಿದ್ಯಾಲಯ ಸಮಿತಿ ಅಪರ ಉಪಾಯುಕ್ತ ನಾಗಭೂಷಣಂ, ನಿವೃತ್ತ ಪ್ರಾಚಾರ್ಯ ಕಲ್ಯಾಣಿ, ನಿವೃತ್ತ ಉಪ ಪ್ರಾಚಾರ್ಯ ಜಿ.ಬಿ. ಮೇಸ್ತ್ರಿ, ವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ರುದ್ರಗೌಡ ಪಾಟೀಲ ಇದ್ದರು.

ಪ್ರಭಾರಿ ಪ್ರಾಚಾರ್ಯ ಜಿ.ಎಸ್. ಬಸವರಾಜು ಸ್ವಾಗತಿಸಿದರು. ರಾಜು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ಪ್ರದೀಪಕುಮಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net