'ಪಿಎಂ ರಾಹತ್' ಯೋಜನೆ ರಾಜ್ಯದಲ್ಲೂ ಜಾರಿ

ಸಚಿವ ಯು.ಟಿ. ಖಾದರ್
ಸಚಿವ ಯು.ಟಿ. ಖಾದರ್
Published on

ಪ್ರಮುಖ ಮುಖ್ಯಾಂಶಗಳು

  • ಅಪಘಾತವಾದಾಗ ತುರ್ತು ಚಿಕಿತ್ಸೆಗೆ 2.50 ಲಕ್ಷ ರೂ.
  • ಸಚಿವ ಯು.ಟಿ. ಖಾದರ್ ಹೇಳಿಕೆ
ಮಂಗಳೂರು: ರಸ್ತೆ ಅಪಘಾತಗಳಾದಾಗ ಗಾಯಾಳಿಗೆ ತುರ್ತು ಚಿಕಿತ್ಸೆಯನ್ನು ಒದಗಿಸುವ ನಿಟ್ಟಿನಲ್ಲಿ ದೇಶದೆಲ್ಲೆಡೆ ಜಾರಿಗೊಳಿಸಲಾಗಿರುವ "ಪಿಎಂ ರಾಹತ್' ಯೋಜನೆಯನ್ನು ರಾಜ್ಯದಲ್ಲಿ ವ್ಯವಸ್ಥಿತವಾಗಿ ಜಾರಿಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ 2014-15ನೇ ಸಾಲಿನಲ್ಲಿ ಮುಖ್ಯಮಂತ್ರಿಗಳು ಹರೀಶ್ ಸಾಂತ್ವನ ಯೋಜನೆಯನ್ನು ಜಾರಿಗೊಳಿಸಿದ್ದರು. ಅದನ್ನು ಪರಿಗಣಿಸಿ ಕೇಂದ್ರ ಸರ್ಕಾರ ಹೊಸದಾಗಿ ಪಿಎಂ ರಾಹತ್ ಯೋಜನೆ ದೇಶದೆಲ್ಲೆಡೆ ಜಾರಿಗೆ ತಂದಿದೆ. ಆದರೆ ತಾಂತ್ರಿಕ ಕಾರಣದಿಂದ ಇನ್ನೂ ಈ ಯೋಜನೆ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೊಂಡಿಲ್ಲ. ಈ ಯೋಜನೆ ಅತ್ಯಂತ ಉಪಯುಕ್ತವಾಗಿರುವ ಕಾರಣ ಪಿಎಂ ರಾಹತ್ ಯೋಜನೆಯಡಿ ತುರ್ತು ಚಿಕಿತ್ಸೆಗಾಗಿ ನೀಡಲಾಗುವ 1.50 ಲಕ್ಷ ರೂ. ಅದರ ಜೊತೆ ರಾಜ್ಯ ಸರ್ಕಾರದಿಂದ 1 ಲಕ್ಷ ರೂ. ಹೀಗೆ ಒಟ್ಟು 2.5 ಲಕ್ಷ ರೂ.ಗಳವರೆಗೆ ಚಿಕಿತ್ಸಾ ವೆಚ್ಚ ಭರಿಸಲು ನಿರ್ಧರಿಸಲಾಗಿದೆ ಎಂದರು.
ಹೆಚ್‌ಪಿವಿ ಲಸಿಕೆ ಕಡ್ಡಾಯವಿಲ್ಲ
ಹ್ಯೂಮನ್ ಪ್ಯಾಪಿಲೋಮವೈರಸ್ (ಹೆಚ್‌ಪಿವಿ) ಲಸಿಕೆಯನ್ನು ಮಕ್ಕಳಿಗೆ ನೀಡುವುದನ್ನು ಕಡ್ಡಾಯಗೊಳಿಸಲಾಗುವುದಿಲ್ಲ. ಅದನ್ನು ಮಕ್ಕಳಿಗೆ ಕೊಡಿಸಬೇಕೋ, ಬೇಡವೋ ಎನ್ನುವುದು ಮಕ್ಕಳ ಪೋಷಕರು ಅಥವಾ ಹೆತ್ತವರು ನಿರ್ಧರಿಸಬೇಕು. ಈ ಕುರಿತಂತೆ ಎಲ್ಲಾ ಶಾಲೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗುತ್ತಿದೆ ಎಂದರು.
ವೆನ್ಲಾಕ್‌ಗೆ 100 ಕೋಟಿ ರೂ. ವೆಚ್ಚದ ಒಪಿಡಿ
ರಾಜ್ಯ ಸರ್ಕಾರ ಹಾಗೂ ಕೆಎಂಸಿ ಸೇರಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊರರೋಗಿಗಳ ವಿಭಾಗ (ಒಪಿಡಿ) ಕಟ್ಟಡ ನಿರ್ಮಾಣವಾಗಲಿದೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಸೇವೆ ನೀಡಲು ಒಪ್ಪಂದ ಮಾಡಿಕೊಂಡ ಖಾಸಗಿ ವೈದ್ಯಕೀಯ ಕಾಲೇಜು ಅಥವಾ ಆಸ್ಪತ್ರೆಯವರು ನಿಗದಿತ ಸಮಯದಲ್ಲಿ ಅನುಷ್ಠಾನಕ್ಕೆ ಮುಂದಾಗದಿದ್ದರೆ ಅವರ ಒಪ್ಪಂದ (ಎಮ್‌ಒಯು) ರದ್ದುಪಡಿಸಿ ಬೇರೆಯವರ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಖಾದರ್ ಹೇಳಿದರು.

"ಕೋಮು ಗಲಭೆಗಳಿಂದ ನಲುಗಿದ್ದ ದ.ಕ. ಜಿಲ್ಲೆ ಕಳೆದ ಒಂದೂವರೆ ವರ್ಷದಿಂದ ಶಾಂತವಾಗಿದೆ. ಪೊಲೀಸ್ ಆಯುಕ್ತರು ಹಾಗೂ ಎಸ್‌ಪಿಯವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಾಜ ಘಾತಕ ಘಟನೆಗಳು ಮರುಕಳಿಸಬಾರದು. ಶಾಂತಿ, ಸೌಹಾರ್ದತೆ ನೆಲೆಸಬೇಕು. ಅದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ."

— ಯು.ಟಿ. ಖಾದರ್, ಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net