ಪ್ರಧಾನಿ ಮಂಗಳೂರು ಭೇಟಿ ಹಿನ್ನೆಲೆ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡು

IMG-20220831-WA0100
Published on

ಮಂಗಳೂರು: ಎಸ್ ಪಿ ಜಿ ಭದ್ರತೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2 ರಂದು ಮಂಗಳೂರು ಭೇಟಿ ನೀಡಲಿದ್ದು, ಈ ಸಮಯ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳೇನು?
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ನೀಡಿದ ವಿವರ ಹೀಗಿದೆ:

ಪ್ರಧಾನ ಮಂತ್ರಿಯವರು ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸುವ ಸಮಯ ಹಾಗೂ ಅವರು ಸಂಚರಿಸುವ ರಸ್ತೆಯಾದ ಕೂಳೂರು ಜಂಕ್ಷನ್ ನಿಂದ ಕೊಟ್ಟಾರ ಚೌಕಿ ಜಂಕ್ಷನ್ ವರೆಗಿನ ರಸ್ತೆಯಲ್ಲಿ ಸೆ.2 ರಂದು ಬೆಳಗ್ಗೆ 06:00 ಗಂಟೆಯಿಂದ ಕಾರ್ಯಕ್ರಮ ಮುಹಿಯುವ ತನಕ ಸಾಮಾನ್ಯ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ.

ಕೆ.ಪಿ.ಟಿ. ಕಡೆಯಿಂದ ಸಾರ್ವಜನಿಕ ಸಮಾವೇಶಕ್ಕೆ ಆಗಮಿಸುವ ಲಘುವಾಹನ ಮತ್ತು ದ್ವಿಚಕ್ರ ವಾಹನದಾರರು ವಾಹನ ಪಾರ್ಕಿಂಗ್ ಗಾಗಿ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದ ಪೂರ್ವಕ್ಕೆ ಇರುವ ಬಯಲು ಪಾರ್ಕಿಂಗ್ ಸ್ಥಳಕ್ಕೆ ಕೊಟ್ಟಾರ ಚೌಕಿಯಿಂದ ಮಾಲೇಮಾರ್ ಮುಖಾಂತರ ಹಾಗೂ ಅಮೆಝಾನ್ ಗೋಡೌನ್ ಪಕ್ಕದಲ್ಲಿನ ಮಾರ್ಗದ ಮುಖಾಂತರ ಹಾಗೂ ಕೂಳೂರು ಹಾಗೂ ಕಾವೂರು ಜಂಕ್ಷನ್ ಕಡೆಯಿಂದ ಆಗಮಿಸುವ ಲಘು ವಾಹನಗಳು ಉರುಂಡಾಡಿ ರಸ್ತೆ ಹಾಗೂ ಕೂಳೂರಿನ ಟಾಟಾ ಶೋ ರೂಮ್ ಮುಂದೆ ಇರುವ ಕೂಳೂರು- ಕಾವೂರು ರಸ್ತೆ ಮುಖಾಂತರ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಅವಕಾಶವಿರುತ್ತದೆ.

ಉಡುಪಿ ಕಡೆಯಿಂದ ಬರುವ ಘನ ವಾಹನಗಳು, ಗೂಡ್ಸ್ ವಾಹನಗಳು ಪಡುಬಿದ್ರಿ ಜಂಕ್ಷನ್ ನಿಂದ ಕಾರ್ಕಳ- ಬೆಳಣ್‌ ಮಾರ್ಗವಾಗಿ ಮೂಡಬಿದ್ರೆ, ಕಿನ್ನಿಗೋಳಿ ಮೂಲಕ ಮಂಗಳೂರು, ಬಂಟ್ವಾಳ, ಮಲ್ಕಾರ್, ಮುಡಿಪು, ತೊಕ್ಕೊಟ್ಟು, ಪುತ್ತೂರು, ಬೆಂಗಳೂರು, ಮೈಸೂರು ಕಡೆಗೆ ಸಂಚರಿಸುವುದು.

ಇನ್ನಿತರ ಲಘು ವಾಹನಗಳು ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಮುಲ್ಕಿಯಿಂದ ಕಿನ್ನಿಗೋಳಿ-ವಿಜಯ ಸನ್ನಿಧಿ-ಮೂರು ಕಾವೇರಿ- ಕಟೀಲು-ಬಜೈ- ಕೈಕಂಬ- ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡಬಿದ್ರಿ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುವುದು,

ಸುರತ್ಕಲ್ ನಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಕಾನ ರಸ್ತೆ- ಜೋಕಟ್ಟೆ-ಪೊರ್ಕೋಡಿ- ಬಜ್ಜೆ ಕೈಕಂಬ-ಗುರುಪುರ ಮಾರ್ಗವಾಗಿ ಮಂಗಳೂರು ಕಡೆಗೂ ಬಂಟ್ವಾಳ ಕಡೆಗೆ ಹೋಗುವ ವಾಹನಗಳು ಮೂಡಬಿದ್ರೆ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುವುದು.

ತಲಪಾಡಿ, ಉಳ್ಳಾಲ ಕಡೆಯಿಂದ ಬಿ ಸಿ ರೋಡ್, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬೆಂಗಳೂರು, ಮೈಸೂರು ಕಡೆಗೆ ಹೋಗುವ ವಾಹನಗಳು, ಕೆ.ಸಿ.ರೋಡ್ ಹಾಗೂ ತೊಕ್ಕೊಟ್ಟು-ಮುಡಿಪು ಮಾರ್ಗವಾಗಿ ಬಿ ಸಿ ರೋಡ್ ಕಡೆಗೆ ಸಂಚರಿಸುವುದು ಹಾಗೂ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು ನಂತೂರು- ವಾಮಂಜೂರು- ಗುರುಪುರ, ಕೈಕಂಬ ಬಜ್ಜೆ - ಕಟೀಲ್- ಕಿನ್ನಿಗೋಳಿ- ಮುಲ್ಕಿ ಮಾರ್ಗವಾಗಿ ಉಡುಪಿ ಕಡೆಗೆ ಮುಂದುವರಿಯುವುದು.

ಉಡುಪಿ, ಮುಲ್ಕಿ, ಸುರತ್ಕಲ್ ಹಾಗೂ ಬಜ್ಜೆ ಕಡೆಗಳಿಂದ ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರ ಬಸ್ಸುಗಳಿಗೆ ತಣ್ಣೀರುಭಾವಿ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿರುತ್ತದೆ. ದ್ವಿಚಕ್ರ ವಾಹನ, ಕಾರು ಹಾಗೂ ಇತರ ಲಘು ವಾಹನಗಳಿಗೆ ಎನ್ ಎಂ ಪಿ ಟಿ ಮೈದಾನ ಹಾಗೂ ಎಂ ಎಸ್ ಇಝಡ್ ರಸ್ತೆಯಲ್ಲಿ ಲಘು ವಾಹನ ಪಾರ್ಕಿಂಗ್ ಗೆ ಸ್ಥಳವನ್ನು ಗುರುತಿಸಲಾಗಿರುತ್ತದೆ.ಮೂಡಬಿದ್ರೆ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೇರಳ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಕಡೆಗಳಿಂದ ಬರುವ ಬಸ್ಸುಗಳಿಗೆ ಕೆ.ಪಿ.ಟಿ ಮೈದಾನ, ವ್ಯಾಸನಗರ ಮೈದಾನ, ಪದವು ಮೈದಾನ, ಕರಾವಳಿ ಉತ್ಸವ ಮೈದಾನ, ಲೇಡಿಹಿಲ್ ಚರ್ಚ್ ಮೈದಾನ, ಉರ್ವಾ ಮಾರ್ಕೆಟ್ ಮೈದಾನ, ಉರ್ಪಾ ಸ್ಟೋರ್ ಮಾರ್ಕೆಟ್, ಕುಂಟಿಕಾನ ಜಂಕ್ಷನ್ ನಿಂದ ಕಾವೂರು ಕಡೆಗೆ ಹೋಗುವ ರಸ್ತೆಯಲ್ಲಿ ಪಾರ್ಕಿಂಗ್ ಸ್ಥಳವನ್ನು ಗುರುತಿಸಲಾಗಿರುತ್ತದೆ. ಹಾಗೂ ಕಾರು ಹಾಗೂ ಇನ್ನಿತರ ಲಘು ವಾಹನಗಳಿಗೆ ಎ ಜೆ ಆಸ್ಪತ್ರೆ, ಲೇಡಿಹಿಲ್ ಚರ್ಚ್ ಗೌಂಡ್, ಕರಾವಳಿ ಗೌಂಡ್ ಗಳಲ್ಲಿ ಪಾರ್ಕಿಂಗ್ ಗೆ ಸ್ಥಳವನ್ನು ಗುರುತಿಸಲಾಗಿರುತ್ತದೆ.ಉಡುಪಿ, ಮುಲ್ಕಿ, ಸುರತ್ಕಲ್ ಹಾಗೂ ಬಜಪೆ ಕಡೆಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ಫಲಾನುಭವಿಗಳನ್ನು ಮತ್ತು ಜನರನ್ನು ಕರೆದುಕೊಂಡು ಬರುವ ಬಸ್ ಗಳು ಕೂಳೂರು ಜಂಕ್ಷನ್ ನಲ್ಲಿ ಜನರನ್ನು ಇಳಿಸಿ ನಂತರ ತಣ್ಣೀರುಬಾವಿ ರಸ್ತೆ ಕಡೆಗೆ ಚಲಿಸುವುದು ಮತ್ತು ಪಾರ್ಕಿಂಗ್ ಗೆ ನಿಗದಿಪಡಿಸಲಾದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು.

ಮಂಗಳೂರು ನಗರ, ಮೂಡಬಿದ್ರೆ, ಬಂಟ್ವಾಳ, ಪುತ್ತೂರು, ಸುಳ್ಯ, ಮಡಿಕೇರಿ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೇರಳ ಕಡೆಗಳಿಂದ ಕಾರ್ಯಕ್ರಮದ ಸ್ಥಳಕ್ಕೆ ಜನರನ್ನು ಕರೆದುಕೊಂಡು ಬರುವ ವಾಹನಗಳು ಕೊಟ್ಟಾರ ಚೌಕಿ ಜಂಕ್ಷನ್ ಬಳಿಯಲ್ಲಿ ಫಲಾನುಭವಿಗಳನ್ನು ಮತ್ತು ಜನರನ್ನು ಇಳಿಸಿ ನಂತರ ವಾಪಾಸು ಪಾರ್ಕಿಂಗ್ ಗೆ ನಿಗದಿಪಡಿಸಲಾದ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದು.

ತಲಪಾಡಿ, ಉಳ್ಳಾಲ ಕಡೆಯಿಂದ ಬಿ ಸಿ ರೋಡ್, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬೆಂಗಳೂರು, ಮೈಸೂರು ಕಡೆಗೆ ಹೋಗುವ ವಾಹನಗಳು, ಕೆ.ಸಿ.ರೋಡ್ ಹಾಗೂ ತೊಕ್ಕೊಟ್ಟು-ಮುಡಿಪು ಮಾರ್ಗವಾಗಿ ಬಿ ಸಿ ರೋಡ್ ಕಡೆಗೆ ಸಂಚರಿಸುವುದು ಹಾಗೂ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟು ನಂತೂರು- ವಾಮಂಜೂರು- ಗುರುಪುರ, ಕೈಕಂಬ ಬಜ್ಜೆ - ಕಟೀಲ್- ಕಿನ್ನಿಗೋಳಿ- ಮುಲ್ಕಿ ಮಾರ್ಗವಾಗಿ ಉಡುಪಿ ಕಡೆಗೆ ಮುಂದುವರಿಯುವುದು.

ಪ್ರಧಾನ ಮಂತ್ರಿಯವರು ಬಂಗ್ರ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿನ ಕಾರ್ಯಕ್ರಮ ಸ್ಥಳದಿಂದ ಮಂಗಳೂರು ಹೆಲಿಪ್ಯಾಡ್‌ಗ ನಿರ್ಗಮಿಸುವ ವರೆಗೆ ಮೇಲ್ಕಂಡ ಎಲ್ಲಾ ವಾಹನ ಸಂಚಾರ ಬದಲಾವಣೆಯು ಜ್ಯಾರಿಯಲ್ಲಿರುತ್ತದೆ.

ವಿವಿಐಪಿ ಪಾಸುಗಳನ್ನು ಹೊಂದಿರುವವರ ವಾಹನಗಳಿಗೆ ಬಂಗ್ರಕೂಳೂರು ಡೆಲ್ಟಾ ಗ್ರೌಂಡ್ ಬಳಿಯಲ್ಲಿ ಪಾರ್ಕಿಂಗ್ ಗೆ ಸ್ಥಳ ನಿಗದಿಪಡಿಸಲಾಗಿರುತ್ತದೆ.ವಿಐಪಿ ಪಾಸುಗಳನ್ನು ಹೊಂದಿರುವ ವಾಹನಗಳಿಗೆ ರೆನಾಲ್ಡ್ ಶೋ ರೂಮ್ ಎದುರುಗಡೆಯ ವಿ ಆರ್ ಎಲ್ ಗೋಡೌನ್‌ ಬಳಿಯ ಸೋಮಯಾಜಿ ಗೌಂಡ್ ಹಾಗೂ ಎ ಜೆ ಶೆಟ್ಟಿ ಇಂಜಿನಿಯರಿಂಗ್ ಕಾಲೇಜು, ಬಂಗ್ರಕೂಳೂರು ಇಲ್ಲಿ ಪಾರ್ಕಿಂಗ್ ಗೆ ಸ್ಥಳ ನಿಗದಿಪಡಿಸಲಾಗಿರುತ್ತದೆ.

ವಿ.ಐ.ಪಿ. ಮತ್ತು ವಿವಿಐಪಿ ಪಾಸ್ ಹೊಂದಿದ ವಾಹನಗಳ ಚಾಲಕರು ಸದ್ರಿ ವಿ.ಐ.ಪಿ. ಮತ್ತು ವಿವಿಐಪಿ ವ್ಯಕ್ತಿಗಳನ್ನು ಕಾರ್ಯಕ್ರಮ ನಡೆಯುವ ಬಂಗ್ರಕೂಳೂರು ಗೋಲ್ಡ್ ಪಿಂಚ್ ಮೈದಾನದ ಗೇಟ್ ಬಳಿ ಇಳಿಸಿದ ಬಳಿಕ, ತಮಗೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡುವುದು ಮತ್ತು ಕಾರ್ಯಕ್ರಮ ಮುಗಿದ ಬಳಿಕ ಪುನಃ ಸ್ಥಳಕ್ಕೆ ಬಂದು ವ್ಯಕ್ತಿಗಳನ್ನು ಕರೆದೊಯ್ಯಬಹುದು.

ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರು ಮತ್ತು ಫಲಾನುಭವಿಗಳು, ಕಾರ್ಯಕ್ರಮ ಮುಗಿದ ಬಳಿಕ ನಿಗದಿತ

ಪಾರ್ಕಿಂಗ್ ಸ್ಥಳಕ್ಕೆ ತೆರಳಿ, ಅಲ್ಲಿಂದ ವಾಹನಗಳಲ್ಲಿ ಆಗಮಿಸಿದ ರಸ್ತೆಗಳಲ್ಲಿಯೇ ವಾಪಾಸು ತೆರಳುವುದು.

ಪ್ರಧಾನ ಮಂತ್ರಿಯವರ ವಾಹನ ಮತ್ತು ಬೆಂಗಾವಲು ವಾಹನಗಳು ಸಂಚರಿಸುವ ಸಮಯ ಈ ಮೇಲ್ಕಂಡಂತೆ ನೀಡಿದ ಎಲ್ಲ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುವ ಯಾವುದೇ ಸಾರ್ವಜನಿಕರು, ಯಾವುದೇ ರೀತಿಯ ಶಸ್ತ್ರಾಸ್ತ್ರ, ಸ್ಫೋಟಕ ವಸ್ತು, ಆಯುಧ, ದಹನ ಶೀಲ ವಸ್ತು, ಕಪ್ಪು ಬಾವುಟ, ಬ್ಯಾನರ್ ಗಳು ಮತ್ತು ಆಕ್ಷೇಪಾರ್ಹ ವಸ್ತುಗಳನ್ನು ಕಾರ್ಯಕ್ರಮ ಸ್ಥಳಕ್ಕೆ ತರುವುದನ್ನು ನಿರ್ಬಂಧಿಸಲಾಗಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್, ವೈಯ್ಯಕ್ತಿಕ ಸೊತ್ತುಗಳನ್ನು ಕಾರ್ಯಕ್ರಮ ನಡೆಯುವ ಸ್ಥಳದ ಪ್ರವೇಶ ದ್ವಾರದಲ್ಲಿ ತಪಾಸಣೆ ಸಮಯ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟು ಸಹಕರಿಸಲು ಕೋರಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರು ತಮಗೆ ನಿಗದಿಪಡಿಸಿದ ಪ್ರವೇಶ ದ್ವಾರಗಳ ಮುಖಾಂತರವೇ ಪ್ರವೇಶಿಸಲು ಕೋರಲಾಗಿದೆ. ಸಾರ್ವಜನಿಕರಿಗೆ ಕೂಳೂರಿನ ರೆನಾಲ್ಟ್ ಶೋ ರೂಮ್ ಕಡೆಯಿಂದ ಮತ್ತು ಕೂಳೂರು ಕಾವೂರು ರಸ್ತೆಯ ವೃಥ್ವಿ ಲೇ ಔಟ್ ಕಡೆಯಿಂದ ಹಾಗೂ ಕೊಟ್ಟಾರ ಚೌಕಿ ಮಾಲಾಡಿ ಕೋರ್ಟ್ ರಸ್ತೆ ಮಾರ್ಗವಾಗಿ ಕಾರ್ಯಕ್ರಮದ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಅಲ್ಲಿ ಅಳವಡಿಸಲಾದ ಪ್ರವೇಶ ದ್ವಾರಗಳ ಮೂಲಕ ತೆರಳುವಂತೆ ಕೋರಲಾಗಿದೆ.

ಮಾನ್ಯ ಪ್ರಧಾನ ಮಂತ್ರಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿ.ವಿ.ಐ.ಪಿ./ಎ.ಐ.ಪಿ. ಮಾಧ್ಯಮದ ವ್ಯಕ್ತಿಗಳು, ಛಾಯಾಗ್ರಾಹಕರು, ಇತರ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು, ಫಲಾನುಭವಿಗಳು, ವಾಹನ ಚಾಲಕರು, ಸ್ಥಳದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು ಹಾಗೂ ಇನ್ನಿತರ ವ್ಯಕ್ತಿಗಳು ಕಡ್ಡಾಯವಾಗಿ ಪೊಲೀಸ್ ಇಲಾಖೆಯಿಂದ ವಿತರಿಸಲಾದ ಪಾಸ್ ಗಳನ್ನು ಹೊಂದಿರತಕ್ಕದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net