

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಬುಧವಾರ ಬೆಳಗ್ಗೆ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಸ್ವಾಮಿ ದರ್ಶನ ಪಡೆದರು.
ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದಲ್ಲಿ ಅಯೋಜಿಸಿರುವ 'ಶ್ರೀ ಕೃಷ್ಣಾರ್ಪಣಂ' ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುವ ವೇಳೆ ಮಾರ್ಗ ಮಧ್ಯೆ ಚಿತ್ರದುರ್ಗಕ್ಕೆ ಆಗಮಿಸಿದರು. ರಾಜ್ಯ ಸರ್ಕಾರದ ಅತಿಥಿಯಾಗಿ ಆಗಮಿಸಿದ ಅವರನ್ನು ಜಿಲ್ಲಾಡಳಿತ ಅಧಿಕಾರಿಗಳು ಹಾಗೂ ದೇವಾಲಯ ಆಡಳಿತ ಮಂಡಳಿ ಪ್ರಮುಖರು ಸ್ವಾಗತಿಸಿದರು.
ನೀಲಕಂಠೇಶ್ವರ ದೇವರಿಗೆ ಅಭಿಷೇಕ, ಅಷ್ಟೋತ್ತರ, ಮಹಾ ಮಂಗಳಾರತಿ ಪಡೆದರು. ಈ ವೇಳೆ ಮೋದಿ ಸೇರಿದಂತೆ ಇಡೀ ಪರಿವಾರಕ್ಕೆ ದೇವರ ಅನುಗ್ರಹ ಬೇಡಿದರು. ನೀಲಕಂಠೇಶ್ವರ ದೇವರ ದರ್ಶನದ ನಂತರ ನಗರದ ಪ್ರವಾಸಿ ಮಂದಿರಕ್ಕೆ ತೆರಳಿ ಉಪಹಾರ ಸೇವಿಸಿದರು
ಜಶೋದಾ ಅವರು ಶಿವನ ದರ್ಶನ ಮಾಡದೆ ಏನನ್ನೂ ಸೇವಿಸುವುದಿಲ್ಲ. ನೀರನ್ನೂ ಕುಡಿಯುವುದಿಲ್ಲ ಎಂದು ಅವರೊಂದಿಗೆ ಬಂದಿದ್ದ ಪರಿವಾರ ಸದಸ್ಯರು ತಿಳಿಸಿದರು. ದೇವರ ದರ್ಶನದ ನಂತರ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಜಶೋದಾ ಬೆನ್ ಉಪಹಾರ ಸೇವನೆಗೆ ಮುನ್ನಾ ಅರಳಿಹತ್ತಿ ಮರಕ್ಕೆ ಕೈ ಮುಗಿದು ಬಳಿಕ ಉಪಹಾರ ಸೇವಿಸಿದರು.