ಆರ್ಥಿಕ ವ್ಯವಸ್ಥೆಗೆ ನಮೋ ಕೊಡುಗೆ ಅಪಾರ ; ಸಂಸದ ಜಿ.ಎಸ್.ಬಸವರಾಜು ಬಣ್ಣನೆ

17Tmk_PM_Modi_Birthday
Published on

ತುಮಕೂರು: ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಜನಸಾಮಾನ್ಯನೂ ನೇರವಾಗಿ ಪಾಲ್ಗೊಳ್ಳುವಂತೆ ಮಾಡಿದ ‘ಪ್ರಧಾನಮಂತ್ರಿ ಜನ್ ಧನ್’ ಯೋಜನೆ ಅರ್ಥ ವ್ಯವಸ್ಥೆ ಬದಲಾವಣೆಯಲ್ಲಿನ ಮೈಲಿಗಲ್ಲು ಎಂದು ಸಂಸದ ಜಿ.ಎಸ್.ಬಸವರಾಜು ಬಣ್ಣಿಸಿದರು.

ನಗರದ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಶುಕ್ರವಾರ ಬಿಜೆಪಿ ನಗರ ರೈತಮೋರ್ಚಾ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಆಚರಣೆ ಅಂಗವಾಗಿ ಗೋಪೂಜೆ, ಪ್ರಗತಿಪರ ರೈತರು ಹಾಗೂ ನಿವೃತ್ತ ಯೋಧರ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಮೇಕ್ ಇನ್ ಇಂಡಿಯಾ’ ಯೋಜನೆ ಮೂಲಕ ಸುಲಭವಾಗಿ ವ್ಯವಹಾರ ನಡೆಸಲು ಸಾಧ್ಯವಾಗುವಂತಹ ಉತ್ತಮ ವಾಣಿಜ್ಯ ವಾತಾವರಣ ಕಲ್ಪಿಸಿಕೊಡುತ್ತೇವೆಂದು ವಿದೇಶಿ ಹೂಡಿಕೆದಾರರಿಗೆ ಹಾಗೂ ಉದ್ಯಮಿಗಳಿಗೆ ನೀಡಿದ ಆಹ್ವಾನ ಅತ್ಯಂತ ಯಶಸ್ವಿಯಾಯಿತು ಎಂದರು.

ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಜನಸಾಮಾನ್ಯರಿಗೆ ಮೂರು ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಪ್ರಾರಂಭಿಸಿದೆ. ಹಿರಿಯರಿಗೆ ನಿವೃತ್ತಿ ವೇತನ ಹಾಗೂ ಬಡವರಿಗೆ ವಿಮಾ ರಕ್ಷಣೆಯ ಯೋಜನೆಗಳಲ್ಲಿ ಗಮನ ಕೇಂದ್ರೀಕರಿಸುವ ಮೂಲಕ ಜನಪರ ಕಾಳಜಿ ಎತ್ತಿ ಹಿಡಿದಿದೆ ಎಂದರು.

ದೇಶಾದ್ಯಂತ ಸ್ವಚ್ಛತೆ ಕ್ರಾಂತಿ ಮೂಡಿಸುವ ಸಾಮೂಹಿಕ ಜನಾಂದೋಲನದ ಉದ್ದೇಶದಿಂದ ಸ್ವಚ್ಛ ಭಾರತ್ ಮಿಷನ್ ಯೋಜನೆಯನ್ನು ಮಹಾತ್ಮ ಗಾಂ ಜನ್ಮದಿನವಾದ ಅಕ್ಟೋಬರ್ 2ರ 2014ರಂದು ಪ್ರಾರಂಭಿಸಿದರು. ಜನಮನಗೆದ್ದ ಈ ಯೋಜನೆಯ ವಿಸ್ತಾರ ಹಾಗೂ ಪ್ರಭಾವ ಅಮೂಲ್ಯವಾದುದು. ಇದೊಂದು ಐತಿಹಾಸಿಕ ಆಂದೋಲನವಾಗಿ ಗುರುತಿಸಲ್ಪಟ್ಟಿತು ಎಂದು ಹೇಳಿದರು.

ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ನಗರ ರೈತಮೋರ್ಚಾ ಅಧ್ಯಕ್ಷ ಸತ್ಯಮಂಗಲ ಜಗದೀಶ್, ರೈತಮೋರ್ಚಾ ಜಿಲ್ಲಾ ಉಪಾಧ್ಯಕ್ಷ ತರಕಾರಿ ಮಹೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ನೇಕ್ ನಂದೀಶ್, ರುದ್ರೇಶ್, ಪ್ರೇಮಾ ಹೆಗ್ಡೆ, ಜ್ಯೋತಿ, ಸುಜಾತಾ ಚಂದ್ರಶೇಖರ್, ಯುವಮೋರ್ಚಾ ನಗರಾಧ್ಯಕ್ಷ ಹನುಮಂತರಾಜು, ಪ್ರಧಾನ ಕಾರ್ಯದರ್ಶಿ ಗಣೇಶ್ ಜಿ.ಪ್ರಸಾದ್, ಟಿ.ಆರ್.ಸದಾಶಿವಯ್ಯ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮೋರ್ಚಾ ವತಿಯಿಂದ ಆಚರಣೆ: ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಆಸ್ಪತ್ರೆಯಲ್ಲಿರುವ 150ಕ್ಕೂ ಹೆಚ್ಚು ರೋಗಿಗಳಿಗೆ ವಿವಿಧ ರೀತಿಯ ಹಣ್ಣು ವಿತರಿಸಲಾಯಿತು. ಮೋರ್ಚಾ ಜಿಲ್ಲಾಧ್ಯಕ್ಷೆ ಅಂಬಿಕಾಹುಲಿನಾಯ್ಕರ್, ಜಿಲ್ಲಾ ಶಸಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಮೋರ್ಚಾದ ವಿಜಯಾಭಾಸ್ಕರ್, ರೇಖಾ ಶಿವಕುಮಾರ್, ಆದ್ಯಗೌಡ, ಕಾವ್ಯಶಿವಶಂಕರ್, ಶೈಲಶ್ರೀ, ಭಾರತಿರಾಜು ಇದ್ದರು.

ದಲಿತರು, ಬುಡಕಟ್ಟು ಜನಾಂಗ, ರೈತರು ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಜೀವನದಲ್ಲಿ ಪರಿವರ್ತನೆ ತಂದಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ಎಂಬ ಧ್ಯೇಯ ವಾಕ್ಯವನ್ನು ನಿರೂಪಿಸಿದ್ದಾರೆ. ಅಂಬಿಕಾ ಹುಲಿನಾಯ್ಕರ್ ಅಧ್ಯಕ್ಷೆ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net