ಪ್ರಧಾನಿ ನರೇಂದ್ರಮೋದಿ ಸ್ವಾಗತಕ್ಕೆ ಸಿದ್ಧತೆ: ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ ಮಾಹಿತಿ

Nirmalkumar Surana)
Published on

ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆಂದು ಮಾ.12ರಂದು ಮಂಡ್ಯಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ ಹೇಳಿದರು.

ಅಂದು ಮಂಡ್ಯ ಮತ್ತು ಹುಬ್ಬಳ್ಳಿ ಎರಡು ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸುವರು. ಮೊದಲು ಮಂಡ್ಯಕ್ಕೆ ಆಗಮಿಸಿ ಹೆದ್ದಾರಿ ಉದ್ಘಾಟಿಸಿದ ಬಳಿಕ ಹುಬ್ಬಳ್ಳಿಗೆ ತೆರಳುವರು. ಮಂಡ್ಯದ ಪಿಇಎಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ಗಳಲ್ಲಿ ಪ್ರಧಾನಿ ಮೋದಿ ಮತ್ತವರ ತಂಡದ ಸದಸ್ಯರ ಕಾಪ್ಟರ್‌ಗಳು ಲ್ಯಾಂಡ್ ಆಗಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಹೆಲಿಪ್ಯಾಡ್‌ನಿಂದ ಮಂಡ್ಯ ನಗರದ ಪ್ರವಾಸಿಮಂದಿರ ವೃತಕ್ಕೆ ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ಫ್ಯಾಕ್ಟರಿ ವೃತ್ತದವರೆಗೆ ರೋಡ್ ಶೋ ನಡೆಯಲಿದೆ. ನಂತರ ಕಾರಿನಲ್ಲಿ ಗೆಜ್ಜಲಗೆರೆಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆದ್ದಾರಿಯನ್ನು ಲೋಕಾರ್ಪಣೆ ಮಾಡುವರು. ರೋಡ್ ಶೋ ಮತ್ತು ವೇದಿಕೆ ಕಾರ್ಯಕ್ರಮ ಎರಡೂ ಕಡೆ ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿದೆ. ಆದ್ದರಿಂದ ಪೊಲೀಸ್ ಬಿಗಿ ಭದ್ರತೆಯೂ ಇರಲಿದೆ. ಎರಡೂ ಸ್ಥಳಗಳಲ್ಲೂ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗುವುದು ಎಂದರು.

ಕಾರ್ಯಕ್ರಮದ ಸ್ಥಳ ಪರಿಶೀಲನೆ: ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮದ್ದೂರು ತಾಲೂಕು ಗೆಜ್ಜಲಗೆರೆ ಸಮೀಪ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೈಸೂರು-ಕೊಡಗು ಸಂಸದ ಪ್ರತಾಪ್‌ಸಿಂಹ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಎಸ್ಪಿ ಎನ್.ಯತೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net