

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯಿಂದ ಬಹುನೀರೀಕ್ಷಿತ 3800 ಕೋಟಿ ರೂ. ಗಳ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗು ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.
ಮಂಗಳೂರಿನ ಗೋಲ್ಡ್‌ಫಿಂಚ್ ಮೈದಾನದಲ್ಲಿ ಪ್ರಧಾನಿ ಭಾಗವಹಿಸುವ ಸಮಾವೇಶದ ಸಿದ್ಧತೆ ಹಿನ್ನೆಲೆಯಲ್ಲಿ ನಗರದ ಆಯಕಟ್ಟಿನ ಪ್ರದೇಶದಲ್ಲಿ ಪೊಲೀಸರು ನಿಯೋಜನೆಗೊಂಡಿದ್ದು, ಗೋಲ್ಡ್‌ಫಿಂಚ್ ಮೈದಾನ, ಪ್ರಮುಖ ರಸ್ತೆ, ಕೇಂದ್ರಗಳನ್ನು ಎಸ್‌ಪಿಜಿ ನಿಯಂತ್ರಣಕ್ಕೆ ಪಡೆದುಕೊಂಡಿದೆ.
ಇಡೀ ನಗರ ಅಕ್ಷರಶಃ ಭದ್ರಕೋಟೆಯಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ವಾಹನ ಹಾಗೂ ಸಾರ್ವಜನಿಕರನ್ನು ಪ್ರಮುಖ ತಪಾಸಣಾ ಕೇಂದ್ರಗಳಲ್ಲಿ ತಪಾಸಣೆ ನಡೆಸಿದ ನಂತರ ಬಿಡಲಾಗುತ್ತದೆ. ಉಡುಪಿ ಕಡೆಯಿಂದ ಬರುವ ಭಾರ ವಾಹನಗಳನ್ನು ಪಡುಬಿದ್ರಿಯಲ್ಲಿ ತಡೆದು ವಾಪಸು ಕಳುಹಿಸಲಾಗುತ್ತಿದೆ. ಪಣಂಬೂರು ನಂತರ ಯಾವ ವಾಹನಗಳಿಗೂ ಪ್ರವೇಶ ಇಲ್ಲ. ಸಹ್ಯಾದ್ರಿ ಕಾಲೇಜು, ಪಡೀಲ್ ಬಳಿ ಚೆಕ್ ಪಾಯಿಂಟ್ ಇದ್ದು, ಮಂಗಳೂರಿನ ಗೋಲ್ಡ್‌ಫಿಂಚ್ ಮೈದಾನಕ್ಕೆ ಆಗಮಿಸಬಹುದಾದ ನಂತೂರು ಹಾಗೂ ಲೇಡಿಹಿಲ್ ರಸ್ತೆಗಳನ್ನು ಬಂದ್ ಮಾಡಲಾಗಿದೆ.
9 ಗಂಟೆಯಿಂದಲೇ ಜನ ಆಗಮನ: ಕಾರ್ಯಕ್ರಮ ಅಧಿಕೃತವಾಗಿ ಮಧ್ಯಾಹ್ನ 1 ಗಂಟೆಗೆ ಆರಂಭವಾಗಬೇಕಿದ್ದರೂ ಉತ್ಸಾಹಿ ಕಾರ್ಯಕರ್ತರು ಬೆಳಗ್ಗಿನಿಂದಲೇ ಬರತೊಡಗಿದ್ದರೆ. ವಾಹನ ಸಂಚಾರ ನಿರ್ಬಂಧ ಇರುವುದರಿಂದ ಜನರು ಕನಿಷ್ಠ ಒಂದೆರಡು ಕಿ.ಮೀ. ಆದರೂ ನಡೆಯುವುದು ಅನಿವಾರ್ಯ. ನಗರದಲ್ಲಿ ಬೆಳಗ್ಗಿನಿಂದ ಬಿಸಿಲು ಇರುವುದರಿಂದ, ಮಳೆಯ ಕಿರಿಕಿರಿ ಇಲ್ಲದೆ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಉತ್ತಮ ವಾತಾವರಣ ಉಂಟಾಗಿದೆ. ಇದು ಮೋದಿ ಅಭಿಮಾನಿಗಳ ಉತ್ಸಾಹ ಇಮ್ಮಡಿಗೊಳಿಸಿದೆ.