

ಮೈಸೂರು: ವಿಕಸಿತ ಭಾರತ ಪರಿಕಲ್ಪನೆಯಡಿ ರೈತರ ಸಬಲೀಕರಣಕ್ಕೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬಲಿಷ್ಠ ಭಾರತ ನಿರ್ಮಾಣ ಮಾಡುವ ಕನಸು ಹೊಂದಿದ್ದಾರೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ವಿಶ್ವ ರೈತ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ (ರೈತಬಣ)ದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಜಾಥಾ, ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ರೈತರ ಒಳಿತಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಮಣ್ಣಿನ ಫಲವತ್ತತೆ ಕಾಪಾಡುವ ಗೊಬ್ಬರ, ಮಣ್ಣಿನ ಪರೀಕ್ಷೆ, ಹನಿ ನೀರಾವರಿ ಯೋಜನೆಗಳನ್ನು ರೂಪಿಸಿರುವುದಲ್ಲದೆ, ದೇಶಾದ್ಯಂತ ಅನೇಕ ಕೃಷಿ ಅಧ್ಯಯನ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು.
ರೈತ ಸಂಘಟನೆಗಳು, ರೈತರು ತಮ್ಮ ವಿಚಾರಗಳನ್ನು ವೇದಿಕೆಯೊಳಗೆ ಚರ್ಚಿಸಿ ಬಳಿಕ ಒಮ್ಮತದಿಂದ ಅದನ್ನು ಸರ್ಕಾರದ ಮುಂದೆ ಇಟ್ಟು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಆಗ ಮಾತ್ರ ದೇಶ ಮತ್ತು ರೈತ ಸಂಕುಲದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇತ್ತೀಚೆಗೆ ಮೈಸೂರು, ಕೊಡಗು ಭಾಗದಲ್ಲಿ ಅನೇಕ ಕಡೆ ಶುಂಠಿ ಬೆಳೆಗೆ ವಿಪರೀತ ರಾಸಾಯನಿಕ ಗೊಬ್ಬರ ಬಳಸಿರುವ ಕಾರಣ ಮಣ್ಣಿನ ಫಲವತ್ತತೆ ನಶಿಸಿದೆ. ಇದಕ್ಕೆ ಮತ್ತೆ ಜೀವ ಕೊಡುವ ಅವಶ್ಯಕತೆ ಇದ್ದು, ಬೇವಿನ ಹಿಂಡಿಯನ್ನು ಗೊಬ್ಬರವಾಗಿ ಬಳಸಿ ಮಣ್ಣಿನ ಫಲವತ್ತತೆ ಕಾಪಾಡಬೇಕಿದೆ ಎಂದು ಸಲಹೆ ನೀಡಿದರು.
ರೈತ ಸುಖವಾಗಿದ್ದರೆ ಮಾತ್ರ ದೇಶ ಸುಖವಾಗಿರುತ್ತದೆ. ಈ ನಿಟ್ಟಿನಲ್ಲಿ ರೈತ ಬಣಗಳು ಪ್ರಾಮಾಣಿಕವಾಗಿ ರೈತರ ಏಳಿಗೆಗೆ ಶ್ರಮಿಸಬೇಕು. ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಒಕ್ಕೂಟದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಮಾತನಾಡಿ, ರೈತರನ್ನು ದೇಶದ ಬೆನ್ನೆಲುಬು ಎಂದು ರಾಜಕಾರಣಿಗಳು ಕೇವಲ ವೇದಿಕೆಗಳಲ್ಲಿ ಹೇಳುತ್ತಾರೆ. ಆದರೆ ದೇಶಕ್ಕೆ ಅನ್ನ ನೀಡುವ ರೈತರನ್ನು ಸದಾ ಕಾಲ ನೆನೆಯಲು ವಿಶ್ವ ರೈತ ದಿನವನ್ನು ಸರ್ಕಾರವೇ ಆಚರಿಸಲಿ. ನಮ್ಮ ಸಂಘಟನೆಯಿಂದ ಮುಂದಿನ ವರ್ಷ ಬೆಳಗಾವಿಯಲ್ಲಿ ರೈತ ದಿನ ಆಚರಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಮಹಾ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಬೀರಪ್ಪ ದೇಶನೂರು ಮಾತನಾಡಿ, ಸರ್ಕಾರಗಳು ರೈತ ಪರವಾದ ನಿಲುವು ತಾಳಬೇಕು. ದೇಶಕ್ಕೆ ಅನ್ನ ಕೊಡುವ ರೈತರಿಗೆ ಬೆಂಬಲವಾಗಿ ನಿಲ್ಲಬೇಕು ಎಂದರು.
ರೈತ ಮುಖಂಡರಾದ ಗಣೇಶ ಇಳಿಗೆರ, ಎನ್.ಎಂ.ಸಿದ್ದೇಶ್ ಉತ್ತಂಗಿ, ಮಲ್ಲೀಕ್ ಆವರ್ತಿ, ರವಿಕುಮಾರ್, ಬಸವನಗೌಡ ಪಾಟೀಲ್, ಬಿಡದಿ ಮಹೇಶ್, ರಾಮನಗರ ವಿನೂತಾಗೌಡ, ಈಶ್ವರ್‌ಗೌಡ, ನಾಗರಾಜ್ ಹೂಗಾರ್, ಕಂಠಿ, ಮಂಜು ಪಾಳ್ಯ, ಮಹಬೂಬ್ ಸಾಬ್, ಜವರನಾಯಕ, ಮಂಜುನಾಥ್, ಮಂಜುನಾಥ್ ಜಯಪುರ, ಭೈರೇಗೌಡ, ಹನುಮಂತಪ್ಪ ನಾಯಕ, ಕೃಷ್ಣೇಗೌಡ, ಈರಣ್ಣ ಅಂಗಡಿ, ವೆಂಕಟೇಶ್, ರಾಮೇಗೌಡ, ನಾಗರತ್ನಾ, ಮಂಗಳಾ, ಸುಜಾತಾ ಜಾಧವ್, ಜಯಶೀಲಾ, ರೇಖಾ, ನಾಗವೇಣಿ, ಜ್ಯೋತಿ, ಶ್ರುತಿ, ಶಿವರಾಜು, ದ್ರಾಕ್ಷಿ ಶಿವರಾಮು, ಕೆಂಪರಾಜು, ದಯಾನಂದ ಇತರರು ಇದ್ದರು.
ರಾಜಕಾರಣಿಗಳ ಗೈರಿಗೆ ರೈತರ ಬೇಸರ
ವಿಶ್ವ ರೈತ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಬಹುತೇಕ ರಾಜಕಾರಣಿಗಳು ಗೈರಾಗಿದ್ದಕ್ಕೆ ರೈತ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಸಚಿವರು, ಶಾಸಕರು, ಎಂಎಲ್‌ಸಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಸಂಸದರನ್ನ್ನು ಹೊರತುಪಡಿಸಿ ಬೇರೆ ಯಾರು ಬಾರದಿದ್ದರಿಂದ ಬೇಸರ ವ್ಯಕ್ತಪಡಿಸಿ, ಚುನಾವಣೆ ಸಮಯದಲ್ಲಿ ಮಾತ್ರ ರೈತರ ಬಗ್ಗೆ ಕಾಳಜಿ ತೋರಿಸಿ ಮೊಸಳೆ ಕಣ್ಣೀರು ಹಾಕುತ್ತಾರೆ. ಆದರೆ ಅವರಿಗೆ ಬೆನ್ನೆಲುಬಾಗಿ ನಿಲ್ಲುವುದಿಲ್ಲ ಎಂದು ಟೀಕಿಸಿದರು.
ಎತ್ತಿನ ಗಾಡಿ ಏರಿದ ಸಂಸದ: ವಿಶ್ವ ರೈತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಗೆ ಮೈಸೂರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಯಲದ ಎದುರು ಎತ್ತಿನ ಗಾಡಿ ಏರಿದ ಸಂಸದ ಪ್ರತಾಪಸಿಂಹ ಹಸಿರು ನಿಶಾನೆ ತೋರಿದರು.