

ಹುಬ್ಬಳ್ಳಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶಕ್ಕೆ ಅತ್ಯದ್ಭುತ ಕೊಡುಗೆಗಳನ್ನು ನೀಡಿದೆ. ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆದರೆ ವಿಶ್ವವೇ ನಿಬ್ಬೆರಗಾಗುವಂಥ ಸಾಧನೆ ಆಗಲಿದೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಮೋ ಬ್ರಿಗೇಡ್ ವತಿಯಿಂದ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಏರ್ಪಡಿಸಿರುವ ‘ಇನ್ನೂ ಮಲಗಿದರೆ, ಏಳುವಾಗ ಭಾರತವಿರುವುದಿಲ್ಲ!’ ಉಪನ್ಯಾಸದ ಕೊನೆಯ ದಿನವಾದ ಭಾನುವಾರ ಅವರು ಮಾತನಾಡಿದರು.
ಭಾರತದ ಹೊಸ ಕಲ್ಪನೆಗಳಿಗೆ ಬುನಾದಿ ಹಾಕಿದವರು ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ. ಅವರ ಕನಸು ಮೋದಿ ಅವರು ನನಸು ಮಾಡುತ್ತಿದ್ದಾರೆ ಎಂದರು.
ರಕ್ಷಣಾ ಕ್ಷೇತ್ರ ಹಾಗೂ ಸಾರ್ವಜನಿಕ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ವಿಶ್ವದಲ್ಲಿಯ ಇತರ ರಾಷ್ಟ್ರಗಳೊಂದಿಗೆ ಕೈಗೊಂಡಿರುವ ವಿದೇಶಾಂಗ ನೀತಿಗಳು ಭಾರತಕ್ಕೆ ಹೊಸ ಭವಿಷ್ಯವನ್ನು ತರುತ್ತಿವೆ. ಇದು ಸಹಿಸದೇ ಕೆಲವರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಆದರೂ ಜನರು ಮೋದಿ ಪರವಾಗಿ ಆಶೀರ್ವಾದ ಮಾಡಲಿದ್ದಾರೆ ಎಂದರು.
ಚೀನಾದ ಗುಲಾಮರಾಗಿದ್ದ ಕಾಂಗ್ರೆಸ್ಸಿಗರು, ನಮ್ಮ ಉತ್ಪನ್ನಗಳನ್ನು ಡಂಪಿಂಗ್ ಯಾರ್ಡ್ ಮಾಡಿದ್ದರು. ಮಾರುಕಟ್ಟೆಗಳಲ್ಲಿ ಚೀನಾದ ಉತ್ಪನ್ನಗಳು ಸಿಗುವಂಥ ವ್ಯವಸ್ಥೆ ಮಾಡಿದ್ದರು. ಆದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಹೊಸ ಉದ್ಯಮ ನೀತಿಗಳಿಂದ ಭಾರತವು ವಿಶ್ವದಲ್ಲಿಯೇ ಕಂಗೊಳಿಸುತ್ತಿದೆ. ತೇಜಸ್‌ನಂತಹ ಯುದ್ಧ ವಿಮಾನಕ್ಕೆ ವಿದೇಶದಲ್ಲೂ ಬೇಡಿಕೆ ಸೃಜನೆಯಾಗಿದೆ. ಇದಕ್ಕೆ ಬ್ರಾಂಡ್ ಅಂಬಾಸಡರ್ ಮೋದಿ ಆವರೇ ಆಗಿದ್ದಾರೆ ಎಂಬುದು ವಿಶೇಷ ಎಂದು ವರ್ಣಿಸಿದರು. ಕರ್ನಾಟಕದಲ್ಲಿ ಉಚಿತ ಕೊಡುಗೆಗಳನ್ನು ತಂದು ರಾಜ್ಯವನ್ನು 20 ವರ್ಷಗಳಷ್ಟು ಹಿಂದಕ್ಕೆ ಒಯ್ಯುವಂಥ ಕೆಲಸ ಮಾಡಲಾಗಿದೆ ಎಂದು ಕಾಂಗ್ರೆಸ್ ಸರ್ಕಾರವನ್ನು ಛೇಡಿಸಿದರು.