ಪ್ರಧಾನಿ ಮೋದಿ ಮಣಿಪುರಕ್ಕೂ ಹೋಗಬೇಕಿತ್ತು: ಮಧು ಬಂಗಾರಪ್ಪ

minister madhu bangarappa speek
ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು.
Published on

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಕಚೇರಿಗೆ ಭೇಟಿ ನೀಡಿದಂತೆ ಮಣಿಪುರಕ್ಕೂ ತೆರಳಿ ಅಲ್ಲಿನ ಗಲಭೆಯನ್ನು ಶಮನಗೊಳಿಸುವ ಕೆಲಸ ಮಾಡಬೇಕಿತ್ತು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳಿಂದ ಮಣಿಪುರದಲ್ಲಿ ಗಲಭೆ ನಡೆಯುತ್ತಿದ್ದರೂ ಅಲ್ಲಿಗೆ ಹೋಗಿಲ್ಲ. ಇಸ್ರೋ ಸಾಧನೆಯನ್ನು ಎಲ್ಲರೂ ಮೆಚ್ಚಬೇಕಿದೆ. ಸಿಎಂ ಸಿದ್ದರಾಮಯ್ಯ ಅವರೂ ಹೋಗಿ ಅಭಿನಂದಿಸಿದ್ದಾರೆ. ಇಸ್ರೋಗೆ ಹೋಗದಿದ್ದವರೂ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಮೋದಿ ಪ್ರಚಾರಕ್ಕಾಗಿ ಬಂದಿದ್ದಾರೆ. ದೇಶಕ್ಕೆ ಪ್ರಧಾನಿ ತಂದೆ ಸ್ಥಾನದಲ್ಲಿ ಇದ್ದಂತೆ. ಮೋದಿ ಸ್ವಾಗತಕ್ಕೆ ಬಿಜೆಪಿ ಮುಖಂಡರಿಗೆ ಬ್ಯಾರಿಕೇಡ್‌ನಲ್ಲಿ ನಿಲ್ಲುವಷ್ಟು ಪುಣ್ಯ ಸಿಕ್ಕಿದೆ ಎಂದು ಟಾಂಗ್ ನೀಡಿದರು.
ಲೋಕಸಭಾ ಚುನಾವಣೆಯ ತಯಾರಿ ನಡೆಯುತ್ತಿದೆ. ಕಾಂಗ್ರೆಸ್ ಸಿದ್ಧಾಂತ ಒಪ್ಪಿದವರಿಗೆ ಸ್ವಾಗತ. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪಕ್ಷದ ನಾಯಕರ ತೀರ್ಮಾನಕ್ಕೆ ಬಿಟ್ಟಿದ್ದು. ಪಕ್ಷಕ್ಕೆ ಲಾಭವಾಗುವವರನ್ನು ಮಾತ್ರ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಅಪಾಯಕಾರಿಗಳನ್ನು ಪಕ್ಷದಿಂದ ದೂರವಿಡುವ ಪ್ರಯತ್ನ ನಿರಂತರವಾಗಿದೆ. ಪಕ್ಷಕ್ಕೆ ಬರುವ ನಾಯಕರ ಬಗ್ಗೆ ಕಾರ್ಯಕರ್ತರು ಮತ್ತು ಮುಖಂಡರು ಬಹಿರಂಗವಾಗಿ ಹೇಳಿಕೆ ನೀಡಬಾರದು. ಪಕ್ಷದ ವೇದಿಕೆಯಲ್ಲೇ ಮಾತನಾಡಬೇಕು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು. ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ಅವರಂತಹ ಹಿರಿಯ ನಾಯಕರು ಬಂದಿರುವುದು ಪಕ್ಷಕ್ಕೆ ಬಲ ಹೆಚ್ಚಿಸಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net