

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿರುವ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಚಾಲನೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ‘ವಿಜ್ಞಾನ ಮತ್ತು ತಂತ್ರಜ್ಞಾನ, ಗ್ರಾಮೀಣಾಭಿವೃದ್ದಿ’ ಧ್ಯೇಯವಾಕ್ಯದಡಿ ಜ. 7ರವರೆಗೆ ಒಟ್ಟು ಐದು ದಿನ ಸಮ್ಮೇಳನ ಆಯೋಜನೆಗೊಂಡಿದೆ.
ಸಮ್ಮೇಳನ ಆರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷರಾದ ಪ್ರೋ.ರಂಗಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಅರಮನೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಸಮ್ಮೇಳನದಲ್ಲಿ ಕೇಂದ್ರ ಸಚಿವ ಡಾ. ಹರ್ಷವರ್ಧನ್, ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಪಾಲ ವಿ.ಆರ್. ವಾಲಾ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದಾರೆ.
ಜ.4ರಿಂದ 6ರವರೆಗೆ ಮಕ್ಕಳ ವಿಜ್ಞಾನ ಕಾಂಗ್ರೆಸ್, ಜ.5 ಮತ್ತು 6ರಂದು ಮಹಿಳಾ ವಿಜ್ಞಾನ ಕಾಂಗ್ರೆಸ್ ಮತ್ತು ವಿಜ್ಞಾನ ಸಂವಹನಕಾರರ ಕೂಟ ನಡೆಯಲಿದೆ. ಜತೆಗೆ ಜ. 6ರಂದು ರೈತರ ವಿಜ್ಞಾನ ಕಾಂಗ್ರೆಸ್ ನಡೆಯಲಿದೆ. ಸಮ್ಮೇಳನದಲ್ಲಿ 15 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಗುರುವಾರ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಮೊದಲು ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿ, ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ಪಾರ್ಥನೆ ಸಲ್ಲಿಸಿ, ಮಠದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಳಿಕ ತುಮಕೂರು ನಗರ ಮೈದಾನದಲ್ಲಿ ಕಿಸಾನ್ ಸಮ್ಮಾನ್ ಎರಡನೇ ಹಂತದ ಯೋಜನೆಗೆ ಚಾಲನೆಗೆ ನೀಡಿದರು. ನಂತರ ರಾಜಧಾನಿಗೆ ಮರಳಿ ರಾಜಭವನದಲ್ಲಿ ತಂಗಿದ್ದರು.