ಬುಡಕಟ್ಟು ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ

Meeting photos 1
Published on


ಉಡುಪಿ : ಬುಡಕಟ್ಟು ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಸುಧಾರಿಸಲು ಹಾಗೂ ಕಲ್ಯಾಣಕ್ಕೆ ಅನೇಕ ಯೋಜನೆ ಜಾರಿಗೆ ತಂದಿದೆ. ಇವುಗಳ ಸಮರ್ಪಕ ಅನುಷ್ಠಾನ ಮಾಡುವುದರೊಂದಿಗೆ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.


ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಜನ್​ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ದುರ್ಬಲ ಬುಡಕಟ್ಟು ಜನರಿಗೆ ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ, ರಸ್ತೆ, ಟೆಲಿಕಾಂ ಸಂಪರ್ಕ ಸೇರಿದಂತೆ ಮತ್ತಿತರ ಸುಸ್ಥಿರ ಜೀವನೋಪಾಯದ ಅವಕಾಶ ದಂತಹ ಮೂಲಭೂತ ಸೌಲಭ್ಯಗಳನ್ನು ಅವರುಗಳಿಗೆ ಕಲ್ಪಿಸಲು ಪ್ರಧಾನಮಂತ್ರಿ ಜನ್​ ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಸಮರ್ಪಕ ಅನುಷ್ಠಾನಗೊಳಿಸಬೇಕು ಎಂದರು.


ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ಭೂಮಿಯ ಮಾಲೀಕತ್ವ, ಬೆಳೆಯುವ ಬೆಳೆಗಳು, ಆಯುಷ್ಮಾನ್​, ಆಧಾರ್​ ಕಾರ್ಡ್​, ರೇಶನ್​ ಕಾರ್ಡ್​ ಸೌಲಭ್ಯ ಪಡೆದಿರುವ ಬಗ್ಗೆ ಸರ್ವೇ ಮಾಡಿ ಮಾಹಿತಿಗಳನ್ನು ಪಡೆದುಕೊಳ್ಳಬೇಕು. ಇದರಿಂದ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.


ಹಾಡಿಯಲ್ಲಿ ವಾಸವಿರುವ ಕೊರಗ ಜನಾಂಗದ ಪ್ರತಿಯೊಬ್ಬರಿಗೂ ಆಧಾರ್​ ಕಾರ್ಡ್​ ಲಭ್ಯವಾಗುವಂತೆ ಕ್ರಮವಹಿಸಬೇಕು. ಸಾಧ್ಯವಾದಲ್ಲಿ ಅವರುಗಳು ವಾಸವಿರುವ ಹಾಡಿಗಳಲ್ಲಿಯೇ ಕ್ಯಾಂಪ್​ಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.


ಪ್ರಧಾನಮಂತ್ರಿ ಅವಾಸ್​ ಯೋಜನೆಯಡಿ ಬುಡಕಟ್ಟು ಸಮುದಾಯದ ವಸತಿ ರಹಿತರಿಗೆ ಹಾಗೂ ಕಚ್ಚಾ ಮನೆ ಹೊಂದಿದವರಿಗೆ ಪಕ್ಕ ಮನೆಗಳನ್ನು ನಿಮಾರ್ಣ ಮಾಡಿಕೊಡಲು ಮುಂದಾಗಬೇಕು. ಜಲಜೀವನ್​ ಮಿಶನ್​ ಯೋಜನೆಯಡಿ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದವರು ವಾಸವಿರುವ 186 ವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಅವಶ್ಯಕತೆಗಳ ಬಗ್ಗೆ ಸರ್ವೇ ನಡೆಸಿ, ಅಗತ್ಯವಿರುವವರಿಗೆ ನಳ ನೀರಿನ ಸಂಪರ್ಕ ಕಲ್ಪಿಸಬೇಕು ಎಂದರು.


ಸಮುದಾಯದಲ್ಲಿ ವಾಸವಿರುವ ಜನವಸತಿ ಪ್ರದೇಶಗಳಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್​ ಯೋಜನೆಯಡಿ ರಸ್ತೆ ಸಂಪರ್ಕ ಕಲ್ಪಿಸಬೇಕು ಹಾಗೂ ಮೊಬೈಲ್​ ಟವರ್​ಗಳ ನಿಮಾರ್ಣಕ್ಕೆ ಸೂಚನೆ ನೀಡಿದರು. ಪ್ರಧಾನ ಮಂತ್ರಿ ಕಿಸಾನ್​ ಯೋಜನೆಯ ಅನುದಾನ ಅರ್ಹ ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಬೇಕು ಎಂದರು.


ಸಭೆಯಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಎಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net