ಪುಟ್ಟರಾಜ ಸಮ್ಮಾನ ಪ್ರಶಸ್ತಿಗೆ ಪಂ.ಗಣಪತಿ ಭಟ್​ ಹಾಸಣಗಿ ಆಯ್ಕೆ

23 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಡಾ. ಪುಟ್ಟರಾಜ ಗವಾಯಿಗಳ ಜನ್ಮದಿನ ನಿಮಿತ್ತ ನಗರದ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನವು ಸಂಗೀತ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗೈದ ವಿದ್ವಾಂಸರಿಗೆ ನೀಡುವ 2025ನೇ ಸಾಲಿನ ರಾಷ್ಟ್ರ ಮಟ್ಟದ ಪುಟ್ಟರಾಜ ಸಮ್ಮಾನ್​ ಪ್ರಶಸ್ತಿಗೆ ಹಿರಿಯ ಗಾಯಕ ಪಂ. ಗಣಪತಿ ಭಟ್​ ಹಾಸಣಗಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 1 ಲಕ್ಷ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಮಾ. 3ರಂದು ಆಲೂರು ವೆಂಕಟರಾವ್​ ಭವನದಲ್ಲಿ ಏರ್ಪಡಿಸಿರುವ ಪದ್ಮಭೂಷಣ ಡಾ.ಪುಟ್ಟರಾಜ ಗವಾಯಿಗಳವರ ಜನ್ಮದಿನ ಹಾಗೂ ಸಂಗೀತೋತ್ಸವ ಸಮಾರಂಭದಲ್ಲಿ ಪುಟ್ಟರಾಜ ಸಮ್ಮಾನ ಪ್ರದಾನ ಮಾಡಲಾಗುವುದು ಎಂದು ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.

1960ರ ದಶಕದಲ್ಲಿ ಗಾಯನ ವಿದ್ಯೆ ಅರಸಿ ಧಾರವಾಡಕ್ಕೆ ಆಗಮಿಸಿದ ಗಣಪತಿ ಭಟ್​ ಹಾಸಣಗಿ ಅವರು ಪಂ.ಬಸವರಾಜ ರಾಜಗುರು ಶಿಷ್ಯರಾಗಿ ಸರೆಗಮ ಅಲಂಕಾರ ಸ್ವರಗಳಿಂದ ಆರಂಭಿಸಿ 25 ವರ್ಷಗಳಿಗೂ ಅಧಿಕ ಕಾಲ ಶಿಷ್ಯರಾಗಿದ್ದರು. 90ರ ದಶಕದಲ್ಲಿ ಮಹಾರಾಷ್ಟ್ರದಾದ್ಯಂತ ತಮ್ಮ ಅವಿರತ ಕಾರ್ಯಕ್ರಮಗಳ ಬಿಡುವಿನ ವೇಳೆಯಲ್ಲಿ ಸಮಯ ಸದುಪಯೋಗ ಪಡಿಸಿಕೊಳ್ಳಲು ಗ್ವಾಲಿಯರ್​ ಘರಾಣೆಯ ಪಂ.ಸಿ.ಆರ್​.ವ್ಯಾಸ್​ ಅವರಲ್ಲಿ ಅಧ್ಯಯನ ಮುಂದುವರೆಸಿದವರು. ಗುರುಗಳ ಸಂಪೂರ್ಣ ಕೃಪೆಗೆ ಪಾತ್ರರಾಗಿದ್ದರಿಂದಲೇ ಪಂ. ಗಣಪತಿ ಭಟ್​ ಹಾಸಣಗಿ ಅಂತಾರಾಷ್ಟ್ರೀಯ ಸ್ಥರದಲ್ಲಿಯೂ ಕಿರಾಣಾ-ಗ್ವಾಲಿಯರ್​ ಪರಂಪರೆಯ ಮಹಾನ್​ ಗಾಯಕರಾಗಿ ಪ್ರಸಿದ್ಧಿ ಪಡೆದವರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net