

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಬಡವರಿಗೊಂದು ಸ್ವಂತ ಸೂರು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ರಾಜ್ಯ ಸರ್ಕಾರದ ಹಣಕಾಸಿನ ನೆರವಿನೊಂದಿಗೆ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 250 ಗುಂಪು ಮನೆ ನಿರ್ಮಿಸಲು ಮುಂದಾಗಿದ್ದರೂ, ಫಲಾನುಭವಿಗಳಿಲ್ಲದೆ ಈ ಯೋಜನೆ ನನೆಗುದಿಗೆ ಬಿದ್ದಿದೆ.
ಕಾರ್ಕಳ ಪುರಸಭೆ ವ್ಯಾಪ್ತಿಯ ಪತ್ತೊಂಜಿಕಟ್ಟೆ ಪರಿಸರದಲ್ಲಿ ಜಿ-ಪ್ಲಸ್ ಮಾದರಿಯ ಮನೆಗಳ ಸಮುಚ್ಚಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತಾದರೂ, ಈ ಯೋಜನೆ ಪ್ರಯೋಜನ ಪಡೆಯಲು ಮುಂಗಡ ಹಣ ಪಾವತಿಸುವ ಫಲಾನುಭವಿಗಳ ಕೊರತೆಯಿಂದ ಸರ್ಕಾರದ ಯೋಜನೆ ಕಾರ್ಯಗತಗೊಳ್ಳುತ್ತಿಲ್ಲ.
ಬಡವರ ಪಾಲಿಗೊಂದು ಸೂರು ಕಲ್ಪಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗುಂಪು ಮನೆ ನಿರ್ಮಿಸಲು ಕಾರ್ಕಳ ಪುರಸಭೆ ವ್ಯಾಪ್ತಿಯ ಪತ್ತೊಂಜಿಕಟ್ಟೆಯಲ್ಲಿ ಆರು ಎಕರೆ ಜಾಗ ಮೀಸಲಿಡಲಾಗಿದೆ. ಒಟ್ಟು 16 ಕೋ.ರೂ.ಅಂದಾಜು ವೆಚ್ಚದಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಿಕೊಂಡು, ಮೇನಲ್ಲಿ ಕಾಮಗಾರಿಯೂ ಆರಂಭಗೊಂಡಿತ್ತು. ಪ್ರಥಮ ಹಂತದ ಕೆಲಸ ಕಾರ್ಯ ಮುಗಿದು ಬ್ಲಾಕ್ ಅಳವಡಿಸಿಕೊಂಡು ಮನೆ ಗೋಡೆಗಳ ನಿರ್ಮಾಣ ಮುಗಿದಿದೆ. ಉಳಿದ ಕಾಮಗಾರಿ ನಡೆಸಬೇಕಿದ್ದರೆ ಎಲ್ಲ 250 ಮನೆಗಳಿಗೆ ಫಲಾನುಭವಿಗಳನ್ನು ಗೊತ್ತು ಪಡಿಸಬೇಕು ಮತ್ತು ಫಲಾನುಭವಿಗಳು ಒಟ್ಟು ವೆಚ್ಚದ ಶೇ.10ರಿಂದ ಶೇ.15ನ್ನು ಮುಂಗಡವಾಗಿ ಪಾವತಿಸಬೇಕಾಗುತ್ತದೆ. ಆದರೆ ಕಾರ್ಕಳದಲ್ಲಿ ಮನೆ ಬೇಕು ಎಂಬ ಆಸೆ ಇರುವ ಫಲಾನುಭವಿಗಳು ಶೇ.10ರಷ್ಟು ಹಣ ಮುಂಗಡ ಪಾವತಿ ಮಾಡುವ ಸ್ಥಿತಿಯಲ್ಲಿಲ್ಲ.
ಮನೆ ಬಯಸುವ ಪರಿಶಿಷ್ಟ ಜಾತಿ/ಪಂಗಡದವರು ಶೇ.10 (65 ಸಾವಿರ ರೂ.) ಮೊತ್ತ ಮುಂಗಡವಾಗಿ ಪಾವತಿಸಬೇಕು. ಸಾಮಾನ್ಯ ವರ್ಗ ಶೇ.15(96 ನಾವಿರ) ಮೊತ್ತ ಮುಂಗಡ ಪಾವತಿಸಬೇಕು. ಆದರೆ ಇಲ್ಲಿ ಎರಡೂ ವರ್ಗದವರು ನಾನಾ ಕಾರಣಗಳಿಂದ ಮುಂಗಡ ಪಾವತಿಗೆ ಮುಂದೆ ಬರುತ್ತಿಲ್ಲ ಪಟ್ಟಿ ಮಾಡಲಾದ 250 ಫಲಾನುಭವಿಗಳ ಪೈಕಿ 90 ಮಂದಿಯಷ್ಟೇ ಮುಂಗಡ ಪಾವತಿಗೆ ಮುಂದಾಗಿದ್ದಾರೆ. ಫಲಾನುಭವಿ ಸಿಗದೆ ಸಮುಚ್ಚಯ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಿಡುಗಡೆಗೆ ತಾಂತ್ರಿಕ ತೊಂದರೆ ಎದುರಾಗಿದೆ.
ಪುರಸಭೆ ವತಿಯಿಂದ 2009-10ರಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ 229 ಕುಟುಂಬ ಗುರುತಿಸಲಾಗಿತ್ತು. ಪತ್ತೊಂಜಿ ಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯದಲ್ಲಿ ಮನೆಗಾಗಿ 350ಕ್ಕೂ ಅಧಿಕ ಅರ್ಜಿ ಪುರಸಭೆಗೆ ಬಂದು 250 ಮಂದಿ ಆಯ್ಕೆ ಮಾಡಲಾಗಿದೆ. ಆದರೆ ಮುಂಗಡ ಪಾವತಿಯಾಗದೆ ಸಮಸ್ಯೆಯಾಗಿದೆ. ಬಂಗ್ಲೆಗುಡ್ಡೆ, ಐತಕಟ್ಟೆ ಬಂಡಿಮಠ, ಮರಿಣಾಪುರ, ಬೊಬ್ಬಳ ಕಾಲನಿ, ದಾನಕಾಲೆ, ಬಂಗ್ಲೆಗುಡ್ಡೆ ನರ್ಸಿಂಗ್ ಹೋಂ ಹಿಂಭಾಗ, ಹವಾಲ್ದಾರಬೆಟ್ಟು, ರಣವೀರ ಕಾಲನಿ, ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 9 ಕಡೆ ಕೊಳಗೇರಿಗಳಿವೆ.
6.44 ಲಕ್ಷ ರೂ. ಮೊತ್ತದಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳ ಜನಾಂಗದವರಿಗೆ ಕೇಂದ್ರ ಸರ್ಕಾರದಿಂದ 1.5 ಲಕ್ಷ ರೂ.ಮತ್ತು ರಾಜ್ಯ ಸರ್ಕಾರದಿಂದ 2.ಲಕ್ಷ ರೂ., ಹೀಗೆ ಒಟ್ಟು 3.5 ಲಕ್ಷ ರೂ.ಸಹಾಯಧನ ದೊರಕಲಿದೆ. ಉಳಿದ ಮೊತ್ತ ಅರ್ಹ ಫಲಾನುಭವಿಗಳು ಭರಿಸಬೇಕಾಗುತ್ತದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಈ ಮನೆ ಸುತ್ತಳತೆ 358 ಚದರಡಿ ಒಳಗೊಂಡಿದ್ದು, ಒಂದು ಮನೆ ನಿರ್ಮಾಣಕ್ಕೆ 6,44,178 ರೂ.ವೆಚ್ಚ ತಗುಲಲಿದೆ. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ. ಮತ್ತು ರಾಜ್ಯದಿಂದ 1.20 ಲಕ್ಷ ರೂ. ಸಹಾಯಧನ ದೊರಕಲಿದೆ. ಉಳಿದ 3.744 ಲಕ್ಷ ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಸಾಲ ರೂಪದಲ್ಲಿ ಪಡೆಯಲು ಅವಕಾಶವಿರುತ್ತದೆ. ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನದ ಬಳಿಕ ಪಾವತಿಸಬೇಕಾಗಿರುವ 2.94 ಲಕ್ಷ ರೂ.ಗೆ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಒದಗಿಸಲಾಗುತ್ತದೆ. ಬ್ಯಾಂಕ್ ಸಾಲ ಪ್ರತಿ ತಿಂಗಳು ಮರುಪಾವತಿಸಬೇಕು. ಸಾಲ ತೀರಿದ ಬಳಿಕ ಮನೆ ವಾರಸುದಾರರ ಹೆಸರಿಗೆ ಬರಲಿದೆ.
ಪುರಸಭೆ ವ್ಯಾಪ್ತಿಯಲ್ಲಿ ನಿವೇಶನಗಳ ಬೇಡಿಕೆಯಿದೆ. ಜಿ-ಪ್ಲಸ್ ಮನೆ ಯೋಜನೆ ಇದಕ್ಕೆ ಸಹಕಾರಿಯಾಗಿದೆ. ನಿಗದಿತ ಮುಂಗಡ ಮೊತ್ತ ಪಾವತಿಸಿ ಮನೆ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು.-ರೂಪಾ ಟಿ.ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಕಾರ್ಕಳ
ಮುಂಗಡ ಪಾವತಿಸುವ ಫಲಾನುಭವಿಗಳು ಸಿಗದೆ ತಾಂತ್ರಿಕ ತೊಂದರೆ ಎದುರಾಗಿದೆ. ಮುಂಗಡ ಪಾವತಿಸುವ ಫಲಾನುಭವಿಗಳ ಅವಶ್ಯಕತೆಯಿದೆ. ಅದನ್ನು ಭರ್ತಿಗೊಳಿಸಿದಲ್ಲಿ ಕಟ್ಟಡ ನಿರ್ಮಾಣಕ್ಕೆ ಮೊತ್ತ ಬಿಡುಗಡೆಯಾಗಲಿದೆ.-ಮೋಹನ್, ಜೂನಿಯರ್ ಇಂಜಿನಿಯರ್, ಸ್ಲಂ ಬೋರ್ಡ್