

ಚಿಕ್ಕಮಗಳೂರು: ಸಂಸತ್ತಿನ ಎರಡೂ ಸದನಗಳಲ್ಲಿ ಕೃಷಿ ಮಸೂದೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಅಂಗೀಕರಿಸಲಾಗಿದ್ದರೂ ಅವುಗಳ ವಿರುದ್ಧ ಹೋರಾಟ ನಡೆಯುತ್ತಿದ್ದು, ಕೆಲವು ಸ್ಥಾಪಿತ ಹಿತಾಸಕ್ತಿಗಳು ಈ ಷಡ್ಯಂತ್ರದ ಹಿಂದಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2020-22ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿ ಮೂರು ಮಹತ್ವದ ಮಸೂದೆಗಳನ್ನು ಜಾರಿಗೆ ತಂದಿದೆ. ಆದರೆ ಇದರ ವಿರುದ್ಧ ದಲ್ಲಾಳಿಗಳು ಮತ್ತು ಕಮಿಷನ್ ಏಜೆಂಟರು ರಾಜಕೀಯ ದುರುದ್ದೇಶದ ಪ್ರತಿಭಟನೆ ನಡೆಸಿ ಭಾರತ್ ಬಂದ್ ಕರೆ ನೀಡುವ ಮೂಲಕ ರೈತರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ. ರಾಷ್ಟ್ರಾದ್ಯಂತ ನಡೆಯುತ್ತಿರುವ ಭಾರತ್ ಬಂದ್ ಕೇವಲ ರಾಜಕೀಯ ಪ್ರೇರಿತ ಹಾಗೂ ಪ್ರಧಾನಿ ಮೋದಿ ಅವರನ್ನು ವಿರೋಧಿಸುವ ನಾಟಕ ಮಾತ್ರ ಎಂದು ದೂರಿದರು.
ಪಂಜಾಬ್-ಹರ್ಯಾಣದಲ್ಲಿ ಮೊದಲ ಹೋರಾಟ
ಎಪಿಎಂಸಿಗಳನ್ನು ಮಧ್ಯವರ್ತಿಗಳು ನಿಯಂತ್ರಿಸುತ್ತಿರುವ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಈ ಮಸೂದೆಗಳ ವಿರುದ್ಧ ಮೊದಲು ಹೋರಾಟ ಆರಂಭವಾಯಿತು. ಅವರಿಗೆ ಹೆದರಿ ಪಂಜಾಬ್ ಸರ್ಕಾರ ಮಸೂದೆ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿದೆ. ಕೇಂದ್ರದ ಕೃಷಿ ಸ್ಥಾಯಿ ಸಮಿತಿಯಲ್ಲಿದ್ದ ಪಂಜಾಬ್ ಮುಖ್ಯಮಂತ್ರಿ ಅಮರೇಂದರ್ ಸಿಂಗ್, ಕಮಲನಾಥ್‍ರಂತಹ ಕಾಂಗ್ರೆಸ್ ಮುಖಂಡರ ಸಲಹೆಯಂತೆ ಮಸೂದೆ ರಚಿಸಲಾಗಿತ್ತು. ಆದರೆ ಅದೇ ಅಮರೇಂದರ್ ಸಿಂಗ್ ಮುಖ್ಯಮಂತ್ರಿಯಾದ ಕೂಡಲೇ ದಲ್ಲಾಳಿಗಳಿಗೆ ಹೆದರಿ ಮಸೂದೆಗಳನ್ನು ವಿರೋಧಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿತ್ತು.
2013 ಮತ್ತು 2019ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇದೇ ಮಸೂದೆಗಳನ್ನು ಬೆಂಬಲಿಸಿದ ಕಾಂಗ್ರೆಸ್ ಕೂಡ ಈಗ ಅದರ ವಿರುದ್ಧ ನಿಂತಿದೆ. 2013ರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಹಣ್ಣು, ತರಕಾರಿಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಸೂಚಿಸಿದ್ದರು. ಆದರೆ ಇಂದು ಅವರದ್ದೆ ಪಕ್ಷ ಪ್ರತಿಭಟನೆಗಿಳಿದಿದೆ. ಕಳೆದ ನವೆಂಬರ್ ನಲ್ಲಿ ಈ ಮಸೂದೆಗಳನ್ನು ಅನುಷ್ಠಾನಗೊಳಿಸಿದ ದೆಹಲಿ ಮುಖ್ಯಮಂತ್ರಿ ಕೇಜ್ರೀವಾಲ್ ಕೂಡ ಪ್ರತಿಭಟನೆ ಬೆಂಬಲಿಸುತ್ತಿದ್ದು, ಅವರ ಇಬ್ಬಗೆ ನೀತಿಗೆ ಇದು ಸಾಕ್ಷಿ. ಎಪಿಎಂಸಿ ಕಾಯ್ದೆಯನ್ನೇ ಜಾರಿಗೆ ತರದ ಕೇರಳದಲ್ಲಿ ಕಾಯ್ದೆ ವಿರುದ್ಧ ಸಿಪಿಐ ಪ್ರತಿಭಟನೆಗೆ ಮುಂದಾಗಿ ರೈತರಿಗೆ ಮೋಸ ಮಾಡುವ ಇಬ್ಬಂದಿತನ ಪ್ರದರ್ಶಿಸುತ್ತಿದೆ ಎಂದು ದೂರಿದರು.
ಯುವಕರನ್ನು ದಾರಿ ತಪ್ಪಿಸುವ ಸಂಚು
ಖಲಿಸ್ತಾನ್ ಚಳವಳಿ ಬಳಿಕ ಪಂಜಾಬ್‍ನ ಜನರು ಅದನ್ನು ಮರೆತಿದ್ದಾರೆ. ಅಲ್ಲಿನ ಯುವಕರು ದೇಶಕ್ಕಾಗಿ ನಾವು ಎಂದಿರುವಾಗ ಮಸೂದೆಗಳನ್ನು ವಿರೋಧಿಸುವ ನೆಪದಲ್ಲಿ ಅವರನ್ನು ದಾರಿತಪ್ಪಿಸುವ ಸಂಚು ನಡೆಯುತ್ತಿದೆ. ಕೆನಡಾ ಮತ್ತು ಲಂಡನ್‍ನಿಂದ ಭಾರತದಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಧ್ವನಿಯೆತ್ತಲು ಹೇಗೆ ಕಾರಣವಾಯಿತು ಎಂದು ಪ್ರಶ್ನಿಸಿದ ಅವರು, ಈ ದೇಶದ ಸೈನಿಕರು ಭಾರತದ ವಿರುದ್ಧವೇ ತಿರುಗಿ ಬೀಳಬೇಕು. ದೇಶದಿಂದ ಪಂಜಾಬ್ ಬೇರ್ಪಡಬೇಕು ಎನ್ನುವ ಖಲಿಸ್ತಾನ ಚಳವಳಿಯ ಬೀಜ ಬೇರೆ ಬೇರೆ ಭಾಗಗಳಲ್ಲಿ ಇನ್ನೂ ಉಳಿದಿದೆ. ಶಹೀನ್‍ಬಾಗ್ ಚಳವಳಿಯಲ್ಲಿದ್ದ ವ್ಯಕ್ತಿಗಳು, ಸಿಎಎ ವಿರುದ್ಧ ಹೋರಾಡಿದ ತುಕ್ಡೆ ಗ್ಯಾಂಗ್ ಸಹ ಇದರಲ್ಲಿರುವುದು ಸ್ಪಷ್ಟ ಎಂದರು.
ರೈತರಿಗೆ ಆತಂಕ ಬೇಡ
ಈ ವರ್ಷ ಉತ್ತಮ ಮಳೆ ಜತೆಗೆ ಒಳ್ಳೆಯ ಬೆಳೆ ಬಂದಿದ್ದು ಮಸೂದೆಗಳ ಪರಿಣಾಮವಾಗಿ ಮುಂಬಯಿ, ಚೆನ್ನೈನಂತಹ ದೊಡ್ಡ ದೊಡ್ಡ ನಗರಗಳಿಂದ ಹಳ್ಳಿಗಳಿಗೆ ಬಂದ ವರ್ತಕರು ಹೆಚ್ಚು ಬೆಲೆಗೆ ಉತ್ಪನ್ನಗಳನ್ನು ಖರೀದಿಸಿದ್ದಾರೆ. ಆಗಸ್ಟ್ ನಲ್ಲಿ ದೇಶಾದ್ಯಂತ ಬೆಂಬಲ ಬೆಲೆಯಲ್ಲಿ ಅತೀ ಹೆಚ್ಚು ಕೃಷಿ ಉತ್ಪನ್ನ ಖರೀದಿಯಾಗಿದೆ. ಮಸೂದೆ ವಿಚಾರದಲ್ಲಿ ರೈತರಿಗೆ ಯಾವುದೇ ಆತಂಕ ಬೇಡ ಎಂದರು.
ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ಫಸಲ್ ಬಿಮಾ ಯೋಜನೆ, ಹನಿ ನೀರಾವರಿಗೆ ಶೇ.90 ಸಹಾಯಧನ ನೀಡುವ ಮೂಲಕ ರೈತರ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡಲಾಗಿದೆ. ಕೃಷಿ ಸಮ್ಮಾನ್ ಯೋಜನೆ, ಬೇವು ಮಿಶ್ರಿತ ಯೂರಿಯಾದಿಂದ ಕಲಬೆರಕೆ ತಪ್ಪಿಸಿ ಗುಣಮಟ್ಟ ಹೆಚ್ಚಿಸಲಾಗಿದೆ. ಆತ್ಮನಿರ್ಭರ ಭಾರತ ಯೋಜನೆಯಲ್ಲಿ 47 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆರು ಬೃಹತ್ ರಸಗೊಬ್ಬರ ಕೇಂದ್ರ ಸ್ಥಾಪಿಸಿ ಸ್ವಾವಲಂಬನೆ ಸಾಧಿಸಲು ಪ್ರಧಾನಿ ಮುಂದಾಗಿದ್ದಾರೆ ಎಂದು ಹೇಳಿದರು.