

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ವಿವಿಧ ತೆರಿಗೆ ಸಂಗ್ರಹ, ವ್ಯಾಪಾರ ಪರವಾನಗಿ ನೀಡುವಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಿ. ತೆರಿಗೆ ಆದಾಯ ಸೋರಿಕೆಯಲ್ಲಿ ಪಾಲಿಕೆ ಸಿಬ್ಬಂದಿ ಪಾತ್ರ ದೊಡ್ಡದಿದ್ದು, ವಾರ್ಷಿಕ ಕೋಟ್ಯಂತರ ರೂ. ಆದಾಯ ನಷ್ಟ ಉಂಟಾಗುತ್ತಿದೆ. ತೆರಿಗೆ ಕಟ್ಟುವವರಿಗೆ ಸೌಲಭ್ಯ ಕಲ್ಪಿಸಿ ಎಂದು ಪಾಲಿಕೆ ಅಧಿಕಾರಿಗಳಿಗೆ ಉದ್ಯಮಿಗಳು, ವಿವಿಧ ಸಂಘಟನೆಗಳ ಮುಖಂಡರು ತರಾಟೆಗೆ ತೆಗೆದುಕೊಂಡರು.
ನಗರದ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಗುರುವಾರ ಕರೆದಿದ್ದ 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆಗೆ ತೆರಿಗೆ ಆದಾಯ ಬಾರದಿದ್ದರು ಅಧಿಕಾರಿಗಳು ಅನಧಿಕೃತ ಬಡಾವಣೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. 2ರಿಂದ3 ಕೋಟಿ ರೂ. ಮೌಲ್ಯದ ಬಂಗಲೆಗಳಿದ್ದರು ಪಾಲಿಕೆಗೆ ತೆರಿಗೆ ಕಟ್ಟುತ್ತಿಲ್ಲ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರಿಗೆ ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಸಹ ಪೂರೈಕೆ ಮಾಡುವುದಿಲ್ಲ. ಹಾಗಾಗಿ ಬಜೆಟ್‌ನಲ್ಲಿ ಪ್ರಾಮಾಣಿಕ ತೆರಿಗೆದಾರರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಮೀಸಲಿಡಿ ಆಗ್ರಹಿಸಿದರು.
ಮಾಜಿ ಮೇಯರ್ ವಿಜಯ ಮೋರೆ, ವಿಕಾಸ ಕಲಘಟಗಿ, ಎಸ್. ತೆಂಡೂಲ್ಕರ್, ಮಲ್ಲೇಶ ಚೌಗುಲೆ ಮಾತನಾಡಿ, ಆಸ್ತಿ ದಾಖಲೆಗಳು, ಟ್ರೇಡ್ ಲೈಸೆನ್ಸ್, ಕಟ್ಟಡ ಪರವಾನಗಿ, ತೆರಿಗೆ ಕಟ್ಟುವುದು ಸೇರಿ ಎಲ್ಲವನ್ನು ಆನ್‌ಲೈನ್ ಸೌಲಭ್ಯ ಕಲ್ಪಿಸಿ. ಪ್ರತಿಯೊಂದು ದಾಖಲೆ ಪಡೆಯಲು ಪಾಲಿಕೆ ಕಚೇರಿಗಳಿಗೆ ಅಲೆದಾಡಬೇಕು. ಅಧಿಕಾರಿ, ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದಾ ನಮ್ಮ ಕೆಲಸಗಳು ನಿಗದಿತ ಸಮಯದಲ್ಲಿ ಆಗುತ್ತಿಲ್ಲ. ಹಾಗಾಗಿ ಸಾರ್ವಜನಿಕರಿಗೆ ದೂರು ಸಲ್ಲಿಸಲು ಸಹಾಯವಾಣಿ ಆರಂಭಿಸಿ. ನಗರದಲ್ಲಿ ಸಾರ್ವಜನಿಕ ಶೌಚಗೃಹಗಳ ಸೌಲಭ್ಯಗಳು ಇಲ್ಲ. ಮಾರುಕಟ್ಟೆಗಳಲ್ಲಿ ಸಿಸಿಟಿವಿಗಳ ಅಳವಡಿಕೆ ಇಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ಮನೆಯ ಮುಂಭಾಗದಲ್ಲಿ ಒಳಚರಂಡಿ ಮಡಗಟ್ಟಿ ನಿಲ್ಲುತ್ತಿದೆ. ಸಚಿವರು, ಶಾಸಕರ ಗಮನಕ್ಕೆ ತಂದರು ಪ್ರಯೋಜನವಾಗುತ್ತಿಲ್ಲ. ಈ ಬಾರಿ ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಮೀಸಲಿಟ್ಟು ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೇಯರ್ ಸವಿತಾ ಕಾಂಬಳೆ, ಉಪಮೇಯರ ಆನಂದ ಚೌವ್ಹಾಣ, ಆಯುಕ್ತ ಶುಭ.ಬಿ, ಉಪ ಆಯುಕ್ತ ಉದಯಶಂಕರ ತಳವಾರ, ಲಕ್ಷ್ಮೀ ನಿಪ್ಪಾಣಿಕರ, ಸದಸ್ಯರಾದ ಹಣಮಂತ ಕೊಂಗಾಲಿ ಇತರರಿದ್ದರು.
................