

ಬೆಳಗಾವಿ: ಈ ಬಾರಿ ಗಣೇಶೋತ್ಸವ ಹಬ್ಬಕ್ಕೆ ಭರ್ಜರಿ ತಯಾರಿ ಆರಂಭಿಸಿರುವ ಮಹಾನಗರ ಪಾಲಿಕೆಯು ಗಣೇಶ ವಿಸರ್ಜನೆ ಹೊಂಡಗಳ ದುರಸ್ತಿ, ಸುಣ್ಣ, ಬಣ್ಣ, ಕ್ರೇನ್ ವ್ಯವಸ್ಥೆ ಸೇರಿ ವಿವಿಧ ಸೌಕರ್ಯಕ್ಕಾಗಿ ಬರೋಬ್ಬರಿ 68 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.
ಪಾಲಿಕೆ ವ್ಯಾಪ್ತಿಯ ಕಪಿಲೇಶ್ವರ ದೇವಸ್ಥಾನ ಬಳಿ ಎರಡು ಹೊಂಡ, ಜಕ್ಕೇರಿಹೊಂಡ, ಕೋಟೆಕೆರೆ, ಕಣಬರ್ಗಿ ಸೇರಿ ವಿವಿಧ ಗಣೇಶ ವಿಸರ್ಜನೆ ಹೊಂಡಗಳಲ್ಲಿ ಡಿ-ವಾಟರಿಂಗ್, ಡಿ.ಸಿಲ್ಟಿಂಗ್, ಬಣ್ಣ ಹಚ್ಚುವುದು ಹಾಗೂ ಗಣೇಶ ಮೂರ್ತಿಗಳ ವಿಸರ್ಜನೆ ಕ್ರೇನ್‌ಗಳ ವ್ಯವಸ್ಥೆ ಮಾಡಲಾಗಿದೆ. ಗಣೇಶ ವಿಸರ್ಜನೆ ಬಳಿಕ ಎಲ್ಲ ಹೊಂಡಗಳನ್ನು ಸ್ವಚ್ಛಗೊಳಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ವಿಜರ್ಸಣೆ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಈ ಬಾರಿ ಗಣೇಶ ವಿಸರ್ಜನೆಗೆ ಆಯಾ ವಾರ್ಡ್‌ಗಳಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗುತ್ತಿದೆ. ವಿಸರ್ಜನೆ ವೇಳೆ ಹೊಂಡದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಪಾರ್ಕಿಂಗ್ ನಿರ್ಬಂಧಿಸಲಾಗುತ್ತಿದೆ.
ಈ ಬಾರಿ 379 ಗಣೇಶೋತ್ಸವ ಮಂಡಳಿ ಸೇರಿ ಒಟ್ಟು 12 ಸಾವಿರಕ್ಕೂ ಅಧಿಕ ಗಣೇಶ ಮೂರ್ತಿಗಳು ವಿಸರ್ಜಣೆ ಆಗುವ ಕುರಿತು ಅಂದಾಜಿಸಲಾಗಿದೆ. ಇದಕ್ಕಾಗಿ ಮೊಬೈಲ್ ವಿಜರ್ಸನಾ ಟ್ಯಾಂಕ್ 58 ವಾರ್ಡ್‌ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಕುಡಿಯುವ ನೀರು, ಕೆರೆ ವಿಸರ್ಜನೆ ಮಾಡದಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಎಸೆಯದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿ, ಸದಸ್ಯರು ತಿಳಿಸಿದ್ದಾರೆ.
ಮೇಯರ್ ಮಂಗೇಶ ಪವಾರ್, ಪಾಲಿಕೆ ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ ಹಾಗೂ ಪಾಲಿಕೆ ಆಯುಕ್ತ ಶುಭ ಬಿ ನೇತೃತ್ವದಲ್ಲಿ ಶುಕ್ರವಾರ ಗಣೇಶ ವಿಸರ್ಜನಾ ಮೆರವಣಿಗೆ ಮಾರ್ಗ, ಹೊಂಡಗಳನ್ನಿ ಪರಿಶೀಲನೆ ನಡೆಸಿದರು.
........
ಕೋಟ್ಸ್
ಗಣೇಶೋತ್ಸವ ಹಬ್ಬಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಜರ್ಸನೆ ಹೊಂಡಗಳ ಸ್ವಚ್ಛತೆ, ಸುಣ್ಣ, ಬಣ್ಣ ಹಚ್ಚುವುದು ಕೆಲಸ ಪ್ರಗತಿ ಹಂತದಲ್ಲಿದೆ. ಮೆರವಣಿಗೆ ಮಾರ್ಗಗಳ ದುರಸ್ತಿ ಕಾಮಗಾರಿ ಎರಡು ದಿನದಲ್ಲಿ ಮುಗಿಯಲಿದೆ. ನಿರಂತರ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ.
-ಶುಭ.ಬಿ. ಪಾಲಿಕೆ ಆಯುಕ್ತೆ