ಬೆಳಗಾವಿ ಪಾಲಿಕೆಯಲ್ಲಿ ಪೌರ ಕಾರ್ಮಿಕರ ಅನ್ನಕ್ಕೂ ಕನ್ನ!

palike-belagavi.jpg
Published on

- ಆಯುಕ್ತ, ಉಪ ಆಯುಕ್ತ, ಇತರೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು

- ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪತ್ರ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಇಲ್ಲಿನ ಮಹಾನಗರದಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಹಾಗೂ ಇತರರಿಗೆ ಬೆಳಗಿನ ಉಪಹಾರ ನೀಡದೆ ಮೀಸಲಿಟ್ಟಿರುವ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಪಾಲಿಕೆ ಆಯುಕ್ತ, ಉಪ ಆಯುಕ್ತ ಸೇರಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳಿಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಅಧೀಕ್ಷಕ ಡಾ.ಕೆ.ಧರಣಿ ದೇವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ 257 ಕಾಯಂ ಪೌರಕಾರ್ಮಿಕರು, 372 ನೇರ ಪಾವತಿ ಪೌರ ಕಾರ್ಮಿಕರು, 689 ಹೊರಗುತ್ತಿಗೆ ಪೌರ ಕಾರ್ಮಿಕರು ಸೇರಿ ಒಟ್ಟು 1318 ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಪಾಲಿಕೆ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡದೆ, ಮೀಸಲಿಟ್ಟಿರುವ ಅನುದಾನ ಬಿಡುಗಡೆ ಮಾಡದೆ ಮೇಲ್ನೋಟಕ್ಕೆ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಿದೆ. ಅಲ್ಲದೆ, ಅಧಿಕ ಸಂಖ್ಯೆಯಲ್ಲಿ ಎಸ್‌ಸಿ,ಎಸ್‌ಟಿ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಮಹತ್ವದ ಯೋಜನೆ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.

2022ರವರೆಗೆ ಪೌರ ಕಾರ್ಮಿಕರಿಗೆ ಮತ್ತು ಸ್ವಚ್ಛತಾ ಕಾರ್ಮಿಕರಿಗೆ ಪ್ರತಿ ದಿನ 20 ರೂ. ರಂತೆ ಉಪಹಾರ ವೆಚ್ಚಕೆಂದು ಮಾಸಿಕ ವೇತನದಲ್ಲಿ ಪಾವತಿಸಲಾಗುತ್ತಿತ್ತು. ತದನಂತರ ಸರ್ಕಾರವು ಬೆಳಗಿನ ಉಪಹಾರ ವೆಚ್ಚವನ್ನು 20 ರೂ. ದಿಂದ 35 ರೂ.ಗಳಿಗೆ ಹೆಚ್ಚಿಸಿ ಭತ್ಯೆಯನ್ನು ನಗದು ರೂಪದಲ್ಲಿ ನೀಡದಂತೆ ಷರತ್ತು ವಿಧಿಸಿತ್ತು. ಅಲ್ಲದೆ, 2024ರಲ್ಲಿ ಎಲ್ಲ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ.

ಮಹಾನಗರ ಪಾಲಿಕೆ ಆಯುಕ್ತರು 2024-25ನೇ ಸಾಲಿನಲ್ಲಿ ಪೌರ ಕಾರ್ಮಿಕರ ಲಭ್ಯವಿರುವ 1.75 ಕೋಟಿ ರೂ.ಕ್ಕೆ ಟೆಂಡರ್ ಕರೆದು ಉಪಹಾರ ಕೊಡಬೇಕು. ಅಲ್ಲಿಯವರೆಗೆ ಉಪಹಾರ ಬದಲಿಗೆ ಉಪಹಾರ ಭತ್ಯೆಯನ್ನು ಕೊಡುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು. ನಂತರ 2025ರಲ್ಲಿ ಪೌರಾಡಳಿತ ಇಲಾಖೆಯು ಯಾವುದೇ ಕಾರಣಕ್ಕೂ ಉಪಹಾರ ಬದಲಿಗೆ ನಗದು ರೂಪದಲ್ಲಿ ಪಾವತಿಸುವಂತಿಲ್ಲ. ಒಂದು ವೇಳೆ ಉಪಹಾರ ನೀಡದೆ ನಿರ್ಲಕ್ಷಿಸಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಪತ್ರದ ಮೂಲಕ ಆಯುಕ್ತರಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಮೇಲ್ನೋಟಕ್ಕೆ ಎರಡು ವಾರಗಳ ಕಾಲ ಪೌರ ಕಾರ್ಮಿಕರಿಗೆ ಉಪಹಾರ ನೀಡಿ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯ ವೇಳೆಗೆ ಬೆಳಕಿಗೆ ಬಂದಿದೆ. ಕರ್ತವ್ಯಕ್ಕೆ ನಿರ್ಲಕ್ಷೃ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಿದ್ದಾರೆ‌. ಈ ಪ್ರಕರಣದ ತನಿಖೆ ನಡೆಸುವಂತೆ ನ್ಯಾಯವಾದಿ ಸುರೇಂದ್ರ ಹೂಗಾರ ದೂರು ನೀಡಿದ್ದರು.

.................

ಬಾಕ್ಸ್

ಪೌರ ಕಾರ್ಮಿಕರ ಹೆಸರಿನಲ್ಲಿ ಅವ್ಯವಹಾರ

ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ, ಆರೋಗ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಪೌರ ಕಾರ್ಮಿಕರ ಹೆಸರಿನಲ್ಲಿ ಲಕ್ಷಾಂತರ ರೂ.ಅವ್ಯವಹಾರ ನಡೆಸಿದ್ದಾರೆ. ಬೆಳಗಿನ ಉಪಹಾರ, ಸುರಕ್ಷತಾ ಸಲಕರಣೆಗಳು, ಆರೋಗ್ಯ ಸೌಲಭ್ಯ ನೀಡದರೆ ಹಣ ಪಡೆದುಕೊಂಡಿದ್ದಾರೆ. ಅಲ್ಲದೆ, ಇಎಎಸ್‌ಐ, ಪಿಎಫ್ ಸೌಲಭ್ಯ ಕಲ್ಪಿಸಿಲ್ಲ. ಗುತ್ತಿಗೆದಾರರು, ಮಧ್ಯವರ್ತಿಗಳ ಜತೆಗೆ ಅಧಿಕಾರಿಗಳು ಕೈ ಜೋಡಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಪೌರ ಕಾರ್ಮಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net