ಪಾಲಿಕೆಯಲ್ಲಿ 7 ಕೋಟಿ ರೂ. ತೆರಿಗೆ ವಂಚನೆ

Screenshot_20250710_214522_Google.jpg
Published on

- ತನಿಖೆಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಆಯುಕ್ತರು

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಇಲ್ಲಿನ ಉದ್ಯಮಭಾಗ ಕೈಗಾರಿಕೆ ಪ್ರದೇಶದಲ್ಲಿರುವ ವೇಗಾ ಹೆಲ್ಮೇಟ್ ತಯಾರಿಕಾ ಘಟಕ ಆಸ್ತಿ ತೆರಿಗೆ ವಸೂಲಾತಿ, ತೆರಿಗೆ ವಂಚನೆಯಿಂದ ಪಾಲಿಕೆಗೆ 7 ಕೋಟಿ ರೂ. ತೆರಿಗೆ ವಂಚನೆಯಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ಅಧೀಕ್ಷಕರಿಗೆ ಪಾಲಿಕೆ ಆಯುಕ್ತೆ ಶುಭ.ಬಿ.ದೂರು ಸಲ್ಲಿಸಿದ್ದಾರೆ.

ಉದ್ಯಮಭಾಗ ಕೈಗಾರಿಕೆ ಪ್ರದೇಶದ ಆಸ್ತಿ ನಂ 690 ಪ್ಲಾಟ ನಂ. 12/ಎ. ಪಿಐಡಿ ಸಂಖ್ಯೆ 83158 ಹಾಗೂ 12ಬಿ ಪಿಐಡಿ 47082 ಆಸ್ತಿಯು ದಿಲೀಪ್ ಚಂಡಕ್ ಮತ್ತು ಇತರರ ಹೆಸರಿನಲ್ಲಿದೆ. ಕೈಗಾರಿಕಾ ವೇಗಾ ಹೆಲ್ಮೇಟ್ ತಯಾರಿಕಾ ಘಟಕ ಆಸ್ತಿ ಮರುಮಾಪನ ಮಾಡಿದ್ದು, 2024-25ನೇ ಸಾಲಿನ ತೆರಿಗೆ ಮಾಥ್ರ ಪಾವತಿಸಿದ್ದಾರೆ. ಹಿಂದಿನ ಬಾಕಿ ವರ್ಷದ ವ್ಯತ್ಯಾಸದ ಮೊತ್ತವನ್ನು ಪಾವತಿಸುತ್ತಿಲ್ಲ.

ಈಗಾಗಲೇ ಪಾಲಿಕೆ ಆಯುಕ್ತರ ಕೋರ್ಟ್‌ನಲ್ಲಿ 7,08,66,578 ರೂ. ಬಾಕಿ ತೆರಿಗೆ ಕಟ್ಟುವಂತೆ ಮಾಲೀಕರಿಗೆ ಆದೇಶಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ತೆರಿಗೆ ಪಾವತಿ ಆಗಿಲ್ಲ. ಹೀಗಾಗಿ ಆಸ್ತಿ ತೆರಿಗೆ ವಸೂಲಾತಿ ಮಾಡುವುದು ಹಾಗೂ ಆಸ್ತಿಗೆ ಸಂಬಂಧಿಸಿದ ತೆರಿಗೆ ವಂಚನೆ ಕುರಿತು ಮೇಲ್ನೋಟಕ್ಕೆ ಲೋಪದೋಷಗಳು ಕಂಡು ಬಂದಿವೆ. ಪಾಲಿಕೆ ಬರಬೇಕಾಗಿದ್ದ 7 ಕೋಟಿ ರೂ. ತೆರಿಗೆ ವಂಚನೆ ಪ್ರಕರಣದಲ್ಲಿ ಬಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ವಹಿಸುವಂತೆ ಪಾಲಿಕೆ ಪರಿಷತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿಚಾರಣೆ ನಡೆಸಿ ಪಾಲಿಕೆಗೆ ವರದಿ ಸಲ್ಲಿಸಬೇಕು. ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಹಾನಗರ ಪಾಲಿಕೆ ವ್ಯಾಪ್ತಿಯ ಉದ್ಯಮಬಾ, ಆಟೋ ನಗರ ಸೇರಿ ವಿವಿದೆಡೆ ಕೈಗಾರಿಕೆಗಳು ಪಾಲಿಕೆಗೆ ಕೋಟ್ಯಂತರ ರೂ. ತೆರಿಗೆ ವಂಚನೆ ಮಾಡಿಕೊಂಡು ಬರುತ್ತಿವೆ. ಕೈಗಾರಿಕೆ ಪ್ರದೇಶದಲ್ಲಿರುವ ಬಹುತೇಕ ಕಾರ್ಖಾನೆಗಳು ನಿಯಮ ಮೀರಿ ಕಟ್ಟಡ ನಿರ್ಮಿಸಿಕೊಂಡಿವೆ. ಪಾಲಿಕೆಗೆ 2012ರಿಂದ ಸರಿಯಾಗಿ ತೆರಿಗೆ ಪಾವತಿಯಾಗುತ್ತಿಲ್ಲ. ಇದರಲ್ಲಿ ಪಾಲಿಕೆ ಕಂದಾಯ ವಿಭಾಗದ ಆಯುಕ್ತರು, ತೆರಿಗೆ ವಸೂಲಿ ಗಾರರು, ಡಾಟಾ ಎಂಟ್ರೀ ಆಪರೇಟರ್‌ಗಳು, ಯೋಜನಾ ವಿಭಾಗದ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇವರೆಲ್ಲರೂ ಪಾಲಿಕೆಗೆ ಬರಬೇಕಾಗಿದ್ದ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಪಾಲಿಕೆಯ ಸದಸ್ಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net