

-ಅನರ್ಹ ಸದಸ್ಯರಿಗಿಲ್ಲ ಮತದಾನದ ಹಕ್ಕು?
ಬೆಳಗಾವಿ: ರಾಜಕೀಯ ಪ್ರತಿಷ್ಠೆಯಾಗಿ ಪರಿಣಮಿಸಿರುವ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆಮಾ.15ಕ್ಕೆ ನಡೆಯುವ ಸಾಧ್ಯತೆ ಹೆಚ್ಚಿದೆ.
2024 ಫೆ.15ರಂದು ಮಹಾನಗರ ಪಾಲಿಕೆಯ 22ನೇ ಅವಧಿಗೆ ಆಯ್ಕೆಗೊಂಡಿದ್ದ ಮೇಯರ್‌ಸವಿತಾ ಕಾಂಬಳೆ ಹಾಗೂ ಉಪಮೇಯರ್ ಆನಂದ ಚೌಹಾಣ ಅವಧಿಯ 2025 ೆಬ್ರವರಿ 14ಕ್ಕೆ ಪೂರ್ಣಗೊಂಡಿದೆ. ಇಬ್ಬರು ಸದಸ್ಯರ ಅನರ್ಹ ಪ್ರಕರಣ ನ್ಯಾಯಾಲಯದಲ್ಲಿರುವ ಹಿನ್ನೆಲೆ ಮೇಯರ್ ಆಯ್ಕೆ ಚುನಾವಣೆ ಘೋಷಣೆ ತಡವಾಗಿತ್ತು. ಇದೀಗ ಎಲ್ಲ ಸಮಸ್ಯೆ ಪರಿಹರಿದಿದ್ದು, ಮಾ.15ಕ್ಕೆ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆ ನಡೆಯಲಿದೆ ಎಂದು ಪಾಲಿಕೆ ಮೂಲಗಳು ಖಚಿತಪಡಿಸಿವೆ.
23ನೇ ಅವಧಿಯ ಮೇಯರ್ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿಯಲ್ಲಿನ ಸದಸ್ಯರು ನಡುವೆ ಪೈಪೋಟಿ ಏರ್ಪಟ್ಟಿದ್ದು, ಹಾಲಿ, ಮಾಜಿ ಶಾಸಕರು, ಸಂಸದರ ಮನವೋಲಿಸುವ ಕೆಲಸವನ್ನು ಸದಸ್ಯರು ಆರಂಭಿಸಿದ್ದಾರೆ. ಆದರೆ, ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲ, ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆ ಕೈಗೊಳ್ಳುವ ನಿರ್ಧಾರದ ಮೇಲೆ ಮೇಯರ್ ಅಭ್ಯರ್ಥಿ ಆಯ್ಕೆಗೊಳ್ಳಲಿದ್ದಾರೆ.
ಕಳೆದ ವರ್ಷ ಲೋಕಸಭೆ ಚುನಾವಣೆ ಎದುರಾಗಿದ್ದರಿಂದ ಮರಾಠಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಉತ್ತರಕ್ಕೆ ಮೇಯರ್ ಮತ್ತು ದಕ್ಷಿಣಕ್ಕೆ ಉಪಮೇಯರ್ ಸ್ಥಾನ ನೀಡಿತ್ತು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಮರಾಠಿಗರು ಬಿಜೆಪಿ ಕೈ ಹಿಡಿದ್ದರಿಂದ ಈ ಬಾರಿ ಮೇಯರ್ ಸ್ಥಾನವನ್ನು ದಕ್ಷಿಣ, ಉಪಮೇಯರ್ ಸ್ಥಾನ ಉತ್ತರಕ್ಕೆ ನೀಡಲು ಬಿಜೆಪಿ ಸ್ಥಳೀಯ ನಾಯಕರು ನಿರ್ಧರಿಸಿದ್ದಾರೆ.
ಮಹಾನಗರ ಪಾಲಿಕೆಗೆ ಪ್ರಪ್ರಥಮ ಬಾರಿಗೆ 2021ರಲ್ಲಿ ಮೊದಲ ಬಾರಿಗೆ ಪಕ್ಷದ ಚಿಹ್ನೆ ಅಡಿಯಲ್ಲಿ ಚುನಾವಣೆ ನಡೆದಿದೆ. ಕನ್ನಡ, ಮರಾಠಿ, ಉರ್ದು ಭಾಷಿಕರು ಬಿಜೆಪಿ, ಕಾಂಗ್ರೆಸ್ ಬೆಂಬಲಿಸಿದ್ದಾರೆ. ಯಾವುದೇ ಭಾಷಿಕರು ಮೇಯರ್ ಆದರು ಅದು ಪಕ್ಷದ ಎಂದೇ ಗುರುತಿಸಲಾಗುತ್ತಿದೆ ವಿನಃ ಕನ್ನಡ, ಮರಾಠಿ ಭಾಷಿಕರು ಎಂದು ಪ್ರತ್ಯೇಕವಾಗಿ ಗುರುತಿಸುವುದಿಲ್ಲ. ಪಕ್ಷದಲ್ಲಿ ಒಪ್ಪದಂತೆ ಈ ಬಾರಿ ದಕ್ಷಿಣಕ್ಕೆ ಮೇಯರ್, ಉತ್ತರಕ್ಕೆ ಉಪಮೇಯರ್ ಸ್ಥಾನ ಒಲಿಯಲಿದೆ ಎಂದು ಪಾಲಿಕೆ ಸದಸ್ಯರು ತಿಳಿಸಿದ್ದಾರೆ.