

ಬೆಳಗಾವಿ:ರಾಜ್ಯ ಸರ್ಕಾರದ ಪರಿಸ್ಥಿತಿ ಈಗ ಚಿಂತಾಜನಕವಾಗಿದೆ. ಗುತ್ತಿಗೆದಾರರ ₹60 ಸಾವಿರ ಕೋಟಿ ಬಿಲ್ ಪಾವತಿಯಾಗುವುದು ಬಾಕಿ ಇದೆ. ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲು ಮತ್ತು ಸ್ಥಗಿತಗೊಳಿಸಲು ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರಿ ನೌಕರಿಗೆ ಸಕಾಲಕ್ಕೆ ಸಂಬಳ ಕೊಡುವ ಪರಿಸ್ಥಿತಿಯೂ ಈಗ ಇಲ್ಲ. ಈ ಮಧ್ಯೆ, ರಾಜ್ಯದ 8 ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚುವ ನಿರ್ಧಾರ ಕೈಗೊಂಡಿದೆ’ ಎಂದು ದೂರಿದರು.
‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ದಿನ ಬೆಳಗಾದರೆ, ಸಿ.ಎಂ ಬದಲಾವಣೆ ಬಗ್ಗೆಯೇ ಚರ್ಚೆಯಾಗುತ್ತಿವೆ. ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ಜೋರಾಗಿದೆ. ಡಿ.ಕೆ.ಶಿವಕುಮಾರ್ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಸಚಿವರೇ ನೇರವಾಗಿ ಆರೋಪಿಸಿದ್ದಾರೆ’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿಯಾಗಿ ನಾನು ದಿ.ದೇವರಾಜ ಅರಸು ಅವರ ದಾಖಲೆ ಮುರಿಯಬೇಕು ಎಂದು ಸಿದ್ದರಾಮಯ್ಯ ಕುಳಿತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ. 78 ವರ್ಷದ ಸಿದ್ದರಾಮಯ್ಯ ಅವರಿಗೆ ಮತ್ತೆ ಹೊಸ ಹುಮ್ಮಸ್ಸು ಬಂದಿದೆ. ಈ ಸರ್ಕಾರ ಯಾವಾಗ ಬೀಳುತ್ತದೆಯೋ ಎಂದು ಜನರು ಮಾತನಾಡುತ್ತಿದ್ದಾರೆ. ಇವೆಲ್ಲ ವಿಚಾರಗಳ ಬಗ್ಗೆ ಶಿವಕುಮಾರ್ ಮಾತನಾಡುತ್ತಿಲ್ಲ. ಅವರು ಮಾತನಾಡಿದ್ರೆ ಕಾಂಗ್ರೆಸ್‌ನಲ್ಲಿ ಸ್ಫೋಟವೇ ಆಗುತ್ತದೆ’ ಎಂದು ವ್ಯಂಗ್ಯವಾಡಿದರು.