ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕೆಗೆ ನೀರು ಬೇಡ

IMG-20250204-WA0029.jpg
Published on

ಬೆಳಗಾವಿ: ‘ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯದಿಂದ ಹುಬ್ಬಳ್ಳಿ–ಧಾರವಾಡದ ಕೈಗಾರಿಕೆಗಳಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು’ ಎಂದು ಇಲ್ಲಿನ ಮಹಾನಗರ ಪಾಲಿಕೆ ಮಾಜಿ ಸದಸ್ಯರು ಆಯುಕ್ತೆ ಬಿ.ಶುಭ ಅವರನ್ನು ಒತ್ತಾಯಿಸಿದರು.

ಪಾಲಿಕೆಯಲ್ಲಿ ಮಂಗಳವಾರ ಆಯುಕ್ತರನ್ನು ಭೇಟಿಯಾಗಿ ಚರ್ಚಿಸಿದ ಅವರು, ‘ಪ್ರತಿವರ್ಷ ಬೇಸಿಗೆಯಲ್ಲಿ ಬೆಳಗಾವಿ ನಗರದಲ್ಲೇ ಜಲಬವಣೆ ತಲೆದೋರುತ್ತದೆ. ಹೀಗಿರುವಾಗ ಹಿಡಕಲ್‌ ಜಲಾಶಯದಿಂದ ಹುಬ್ಬಳ್ಳಿ–ಧಾರವಾಡದ ಕೈಗಾರಿಕೆಗಳಿಗೆ ನೀರು ಬಿಡುವುದು ಸರಿಯಲ್ಲ. ಈ ಬಗ್ಗೆ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತನ್ನಿ’ ಎಂದು ಆಗ್ರಹಿಸಿದರು.

‘ಹಿಡಕಲ್‌ ಜಲಾಶಯದಿಂದ ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಿಗೆ 24x7 ಮಾದರಿಯಲ್ಲಿ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ, ನಗರದಲ್ಲಿ ಎಲ್‌ ಅಂಡ್‌ ಟಿ ಕಂಪನಿಯವರು ನೀರು ಸರಬರಾಜು ಜವಾಬ್ದಾರಿ ವಹಿಸಿಕೊಂಡ ನಂತರ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇದರಿಂದ ಮಹತ್ವಕಾಂಕ್ಷಿ ಯೋಜನೆಯೊಂದು ಹಳ್ಳ ಹಿಡಿದಿದೆ’ ಎಂದು ಆಪಾದಿಸಿದರು.

‘ತಮ್ಮ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಕುರಿತಾಗಿ ಚರ್ಚಿಸಲು ಫೆ.5ರಂದು(ಬುಧವಾರ) ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ(ಕೆಯುಐಡಿಎಫ್‌ಸಿ) ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

ಮಾಜಿ ಮೇಯರ್‌ಗಳಾದ ರಮೇಶ ಕುಡಚಿ, ಶಿವಾಜಿ ಸುಂಠಕರ, ಮಾಲೋಜಿರಾವ್‌ ಅಷ್ಟೇಕರ, ಎನ್‌.ಬಿ.ನಿರ್ವಾಣಿ, ವಂದನಾ ಬೆಳಗುಂದಕರ, ಸರಿತಾ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net